ಬೆಂಗಳೂರು: ನಮ್ಮದು ಭಾವನಾತ್ಮಕ ಕುಟುಂಬ. ಹಾಸನ ರಾಜಕೀಯದ ಜೊತೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಾರು 60 ವರ್ಷಗಳ ಸಂಬಂಧ ಹೊಂದಿದ್ದಾರೆ. ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಸ್ತಾಂತರ ಮಾಡುವಾಗ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಯೋಧರು ಹುತಾತ್ಮರಾದಾಗ ಕಣ್ಣೀರು ಹಾಕಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಹಾವೇರಿಯಲ್ಲಿ 75 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಯಾವ ನಾಯಕರೂ ಹೋಗಲಿಲ್ಲ. ನಾನು ಮಾತ್ರ ಹೋಗಿಬಂದಿದ್ದೆ. ಆತ್ಮಹತ್ಯೆಗೆ ಶರಣಾಗಿದ್ದ 75 ಜನ ರೈತರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ ನೀಡಿದ್ದೇನೆ ಎಂದು ಹೇಳಿ ತಿರುಗೇಟು ನೀಡಿದರು. ಇದನ್ನು ಓದಿ: ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು
ರಾಯಚೂರು, ಕಲಬುರಗಿಯಲ್ಲಿ 50 ರಿಂದ 60 ಜನ ರೈತರಿಗೆ ಹಣ ಕೊಟ್ಟು ಬಂದಿದ್ದೇನೆ. ಮಂಡ್ಯದಲ್ಲಿ 200 ಜನ ರೈತ ಕುಟುಂಬಗಳಿಗೆ 50 ಸಾವಿರದಿಂದ 1 ಲಕ್ಷ ರೂ. ಕೊಟ್ಟಿದ್ದೇನೆ. ರೈತರ ಹಾಗೂ ನಾಡಿನ ಜನತೆಯ ನೋವನ್ನು ನಮ್ಮ ಕುಟುಂಬದ ನೋವೆಂದು ಭಾವಿಸುತ್ತೇವೆ. ಹಾವೇರಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಬಿಜೆಪಿ ಮುಖಂಡ ಆರ್.ಅಶೋಕ್ ಎಲ್ಲಿ ಹೋಗಿದ್ದ ಎಂದು ಏಕವಚನದಲ್ಲಿ ಸಂಭೋದಿಸಿದ ಸಿಎಂ, ದೇವೇಗೌಡರ ಬಗ್ಗೆ ಚರ್ಚೆ ಮಾಡುತ್ತಾರೆ ಅಲ್ವಾ? ಯಾವ ರೈತರ ಮನೆಗೆ ಅಶೋಕ್ ಹೋಗಿದ್ದಾನೆಂದು ಹೇಳಲಿ ಎಂದು ಖರವಾಗಿ ಪ್ರಶ್ನಿಸಿದರು. ಇದನ್ನು ಓದಿ: ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂದು ಎಚ್.ಡಿ.ದೇವೇಗೌಡ ಅವರು ಗುರುವಾರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಹೀಗಾಗಿ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ನಾಳೆ ನಿಖಿಲ್ ಕುಮಾರಸ್ವಾಮಿ ಪರ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv