Connect with us

Latest

ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ – ಪೊಲೀಸ್ರಿಗೆ ದಿಶಾ ಹೆತ್ತವರಿಂದ ಧನ್ಯವಾದ

Published

on

ಹೈದರಾಬಾದ್: ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆಗೈದು ಪೊಲೀಸರು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ. ಅವರಿಗೆ ನಮ್ಮ ಧನ್ಯವಾದ ಎಂದು ಹೇಳುವ ಮೂಲಕ ಪಶುವೈದ್ಯೆ ಪೋಷಕರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನನ್ನ ಮಗಳು ತೀರಿಹೋಗಿ ಇವತ್ತಿಗೆ 10 ದಿನಗಳು ಕಳೆದಿದೆ. ಇಂದು ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ನಾನು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಪೊಲೀಸರು ನನ್ನ ಮಗಳಿಗೆ ಭಾಗಶಃ ನ್ಯಾಯ ಕೊಡಿಸಿದ್ದಾರೆ ಎಂದು ಪಶುವೈದ್ಯೆ ತಂದೆ ಖಾಕಿ ಪಡೆಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು

ಇತ್ತ ಸಂತ್ರಸ್ತೆಯ ತಾಯಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಎನ್‍ಕೌಂಟರ್ ನಿಂದ ಸಮಾಧಾನ ಆಗಿದೆ. ನನ್ನ ಮಗಳಿಗೆ ಪೊಲೀಸರು ಹಾಗೂ ತೆಲಂಗಾಣ ಸರ್ಕಾರ ಭಾಗಶಃ ನ್ಯಾಯ ಕೊಡಿಸಿದ್ದಾರೆ. ನನ್ನ ಮಗಳು ಮತ್ತೆ ಮರಳಿ ಬರಲ್ಲ. ಆದರೆ ಪೊಲೀಸರ ಕಾರ್ಯದಿಂದ ಇಂದು ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ. ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಪೊಲೀಸರು ನಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಆಗುವಂತೆ ಮಾಡಿದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ಪೊಲೀಸರು ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ

ಸೈಬರಾಬಾದ್ ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸಿನಿಮಾ ಕಲಾವಿದರು, ರಾಜಕಾರಣಿಗಳು, ಸಾರ್ವಜನಿಕರು ಪೊಲೀಸರಿಗೆ ಸಲಾಂ ಎಂದಿದ್ದಾರೆ. ಬೆಳ್ಳಂಬೆಳಗ್ಗೆ ಒಳ್ಳೆ ಸುದ್ದಿ ಕೊಟ್ಟಿದ್ದೀರಿ, ಅತ್ಯಾಚಾರಿಗಳನ್ನು ಹತ್ಯೆಗೈದಿದ್ದು ಸರಿಯಾಗಿದೆ. ಇದು ಬೇರೆಯವರಿಗೆ ಪಾಠವಾಗಲಿದೆ ಎಂದು ಪೊಲೀಸರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *