ಬೆಂಗಳೂರು: ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡುವ ಯೋಜನೆಯನ್ನು ಈ ವರ್ಷವೂ ಕೈ ಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡುವ ಯೋಜನೆ ಜಾರಿಗೆ ತರುವುದು ಕಷ್ಟ ಅಂತ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಚಿವರ ಮಾತಿನಿಂದ ಈ ಬಾರಿಯೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ಸಿರುವುದು ಡೌಟ್ ಆಗಿದೆ.
Advertisement
Advertisement
ವಿಧಾನ ಪರಿಷತ್‍ನಲ್ಲಿಂದು ಜೆಡಿಎಸ್‍ನ ಸದಸ್ಯ ಮರಿತಿಬ್ಬೇಗೌಡ ವಿಷಯ ಪ್ರಸ್ತಾಪ ಮಾಡಿದರು. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಮಾತ್ರ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಆಗುತ್ತಿದೆ. ಆದರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಯೋಜನೆ ಸಿಗುತ್ತಿಲ್ಲ. ಸರ್ಕಾರ ಮತ್ತೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡಬೇಕು ಅಂತ ಮನವಿ ಮಾಡಿದರು. ಮರಿತಿಬ್ಬೇಗೌಡ ಮಾತಿಗೆ ಧ್ವನಿಗೂಡಿಸಿದ ಬಸವರಾಜ್ ಹೊರಟ್ಟಿ ಮಕ್ಕಳಲ್ಲಿ ಭೇದ-ಭಾವ ಮಾಡಬೇಡಿ. ಎಲ್ಲಾ ವರ್ಗದ ವಿದ್ಯಾರ್ಥಿಗಳಗೆ ಪಾಸ್ ಕೊಡಬೇಕು ಅಂತ ಮನವಿ ಮಾಡಿದರು.
Advertisement
ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮಸ್ಯೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು. 2014ರಿಂದ ಇಲ್ಲಿಯವರೆಗೆ ಸರ್ಕಾರದಿಂದ ಬಾಕಿ ಬರಬೇಕಿದ್ದ 3 ಸಾವಿರ ಕೋಟಿ ರೂ. ಪಾಸ್ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಬೇರೆ ಮಕ್ಕಳಿಗೆ ಪಾಸ್ ಕೊಡಲು ಆಗುತ್ತಿಲ್ಲ. ಸರ್ಕಾರ ಹಣ ಕೊಡದ ಹಿನ್ನೆಲೆಯಲ್ಲಿ ನಿಗಮಗಳು ನಷ್ಟದಲ್ಲಿ ಇದೆ. ನಿಗಮ ಆರ್ಥಿಕವಾಗಿ ಸದೃಢವಾದ ನಂತರ ಪಾಸ್ ವಿತರಣೆ ಬಗ್ಗೆ ಚಿಂತನೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.