ಉಡುಪಿ: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಮಂಗಳೂರಿನಿಂದ ಉಡುಪಿಗೆ ಆಗಮಿಸಿತು. ಉಡುಪಿ ಶೋಕ ಮಾತಾ ಇಗರ್ಜಿಗೆ ಕರೆತಂದು ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಂತಿಮ ನಮನ ಸಲ್ಲಿಸಿದರು. ಬಳಿಕ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಿ, ಧರ್ಮಪ್ರಾಂತ್ಯದ ಪರವಾಗಿ ಅಂತಿಮ ಗೌರವ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಚರ್ಚ್ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಯಿತು. ಇದನ್ನೂ ಓದಿ: ಮನೆಗಳ ಹಕ್ಕು ಪತ್ರ ಕೊಡಿಸಲು ಒತ್ತಾಯ – ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ
ಉಡುಪಿ ಧರ್ಮ ಪ್ರಾಂತ್ಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ, ನಿಧನರಾದವರ ಹೆಸರಿನಲ್ಲಿ ನಾವು ಚರ್ಚ್ ಹಾಲ್ ನಲ್ಲಿ ಬಲಿ ಪೂಜೆಯನ್ನು ನೆರವೇರಿಸಿದ್ದೇವೆ. ಕ್ರೈಸ್ತ ಧರ್ಮದಲ್ಲಿ ಅಂತಿಮ ನಮನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜೀವಿತಾವಧಿಯಲ್ಲಿ ವ್ಯಕ್ತಿ ಜೀವನದಲ್ಲಿ ತಪ್ಪು ಮಾಡಿದ್ದರೆ ಅದಕ್ಕೆ ದೇವರಲ್ಲಿ ಸಾಮೂಹಿಕವಾಗಿ ಕ್ಷಮೆ ಕೋರಲಾಗುತ್ತದೆ. ಮನುಷ್ಯ ಮಾಡಿದ ನ್ಯೂನ್ಯತೆಗಳನ್ನು ನೀಗಿಸಿ ಆತ್ಮ ಪರಮಾತ್ಮನಲ್ಲಿ ಲೀನವಾಗಲಿ. ಆಸ್ಕರ್ ಗೆ ಸ್ವರ್ಗ ಸಾಮ್ರಾಜ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಕುಟುಂಬಕ್ಕಾಗಿ ವಿಶೇಷವಾಗಿ ದೇವರಲ್ಲಿ ಪ್ರಾರ್ಥಿಸಲಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಅವರಿಗೋಸ್ಕರ ನಾವೆಲ್ಲ ಬೇಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್
ಪ್ರಾರ್ಥನೆಯ ಬಳಿಕ ಬ್ರಹ್ಮಗಿರಿಯ ಆಸ್ಕರ್ ಮನೆಗೆ ಮೃತದೇಹ ಕರೆದೊಯ್ಯಲಾಯಿತು. ಮಣಿಪಾಲ ಕ್ರೈಸ್ಟ್ ಚರ್ಚ್‍ನ ಧರ್ಮಗುರು ಫೆಡ್ರಿಕ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಈ ವೇಳೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಹೋದರಿಯರಾದ ಜುಡಿತ್ ಶ್ರೇಷ್ಠ, ಸಾಲಿಯಟ್ ಮತ್ತು ಮರಿಯಟ್, ಮಕ್ಕಳು ಓಶನ್ ಮತ್ತು ಓಶಾನಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ, ಮಾಜಿ ಶಾಸಕ ಜೆ.ಆರ್.ಲೋಬೊ, ಐವನ್ ಡಿಸೋಜ, ಎಂ.ಎ.ಗಫೂರ್ ಮೊದಲಾದವರು ಹಾಜರಿದ್ದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ನಾಯಕರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?