ಜೈಪುರ: ನವೆಂಬರ್ 8 ರಂದು ಕೇಂದ್ರ ಸರ್ಕಾರ ನೋಟ್‍ಬ್ಯಾನ್ ನಿರ್ಧಾರವನ್ನು ಘೋಷಿಸಿದ ನಂತರ ಹಳೆಯ 500 ಹಾಗೂ 1000 ರೂ. ನೋಟ್‍ಗಳನ್ನು ಬದಲಾಯಿಸಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶ ಈಗಾಗಲೇ ಮುಗಿದಿದೆ. ಆದ್ರೆ ಇಲ್ಲಿಬ್ಬರು ಅನಾಥ ಮಕ್ಕಳು ತಮ್ಮ ಮೃತ ತಾಯಿ ಮನೆಯಲ್ಲಿಟ್ಟಿದ್ದ 96 ಸಾವಿರದ 500 ರೂ. ಮೊತ್ತದ ಹಳೇ ನೋಟ್‍ಗಳನ್ನು ಬದಲಾಯಿಸಿಕೊಳ್ಳಬೇಕಿದ್ದು ಈಗ ಕಂಗಾಲಾಗಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ 16 ವರ್ಷದ ಹುಡುಗ ಹಾಗೂ ಆತನ 12ರ ವಯಸ್ಸಿನ ತಂಗಿ ಈಗ ನೋಟ್ ಬದಲಾವಣೆ ಮಾಡಿಕೊಳ್ಳೋದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ನೋಟ್ ಬಲದಾವಣೆಗೆ ನೀಡಲಾಗಿದ್ದ ಗಡುವು ಈಗಾಗಲೇ ಮುಗಿದಿರೋ ಕಾರಣ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ನೋಟ್ ಬದಲಾವಣೆಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಇಲ್ಲಿನ ಸರವಾಡ ಗ್ರಾಮದಲ್ಲಿ ಈ ಮಕ್ಕಳ ತಾಯಿ ವಾಸವಿದ್ದ ಮನೆಯೊಂದರಲ್ಲಿ ಪೊಲೀಸರು ಸರ್ವೇ ಮಾಡಿದಾಗ ಹಳೇ ನೋಟ್‍ಗಳು ಇದ್ದಿದ್ದು ಪತ್ತೆಯಾಗಿದೆ. ಈ ನೋಟ್‍ಗಳನ್ನು ಬದಲಾಯಿಸಿಕೊಡಲು ಆರ್‍ಬಿಐ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಮಕ್ಕಳು ಈಗ ಪ್ರಧಾನಿ ಮೋದಿಗೆ ಪತ್ರ ಬರದಿದ್ದಾರೆ.
96,500 ರೂಪಾಯಿ ಮಕ್ಕಳ ತಾಯಿ ತನ್ನ ಜೀವಿತಾವಧಿಯಲ್ಲಿ ಕೂಡಿಟ್ಟಿದ್ದ ಹಣ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಗುರುಬಕ್ಸಾನಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಹಣವನ್ನು ಹುಡುಗ ತನ್ನ ತಂಗಿಯ ಹೆಸರಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಮಾಡಲು ಬಯಸಿದ್ದಾನೆ. ತನ್ನ ಕೈಯ್ಯಾರೆ ಬರದಿರೋ ಪತ್ರ ಈಗಾಗಲೇ ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.
ಮಕ್ಕಳ ತಾಯಿ ಪೂಜಾ ಬಂಜಾರಾ ದಿನಗೂಲಿ ನೌಕರರಾಗಿದ್ದು, 2013ರಲ್ಲಿ ಅವರನ್ನು ಕೊಲೆ ಮಾಡಲಾಗಿತ್ತು. ಇನ್ನು ಮಕ್ಕಳ ತಂದೆ ರಾಜು ಬಂಜಾರಾ ಅದ್ಕಕೂ ಮೊದಲೇ ಮೃತಪಟ್ಟಿದ್ದರು. ತಾಯಿಯ ಸಾವಿನ ನಂತರ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದಾರೆ. ಇವರನ್ನು ಕೌನ್ಸೆಲಿಂಗ್ ಮಾಡಿದಾಗ, ಆರ್‍ಕೆ ಪುರಂ ಹಾಗೂ ಸರವಾಡಾ ಗ್ರಾಮದಲ್ಲಿ ಮನೆ ಇರುವುದಾಗಿ ತಿಳಿಸಿದ್ರು. ಇದಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಪೊಲೀಸರು ಬೀಗ ಹಕಲಾಗಿದ್ದ ಸರವಾಡಾ ಮನೆಯಲ್ಲಿ ಸರ್ವೇ ಮಾಡಿದಾಗ ಒಂದು ಬಾಕ್ಸ್‍ನಲ್ಲಿ ಹಳೇ 500 ಹಾಗೂ 1000 ರೂ ನೋಟ್‍ಗಳಲ್ಲಿ 96,500 ರೂ. ಹಣ ಜೊತೆಗೆ ಕೆಲವು ಚಿನ್ನಾಭರಣಗಳು ಪತ್ತೆಯಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.
ಹಳೇ ನೋಟ್‍ಗಳ ಬದಲಾವಣೆಗೆ ಸಹಕರಿಸುವಂತೆ ಮಾರ್ಚ್ 17ರಂದು ಮ್ಕಕಳ ಕಲ್ಯಾಣ ಸಮಿತಿ ಆರ್‍ಬಿಐಗೆ ಪತ್ರ ಬರೆದಿತ್ತು. ಆದ್ರೆ ಮಾರ್ಚ್ 22ರಂದು ಆರ್‍ಬಿಐ ಇ-ಮೇಲ್ ಮಾಡಿ ನೋಟ್ ಬದಲಾವಣೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳ ಬಳಿಯಿರುವ ಒಟ್ಟು ಹಣದಲ್ಲಿ 500 ಹಾಗೂ 1000 ರೂ. ಮುಖಬೆಲೆಯ 171 ನೋಟ್‍ಗಳಿವೆ ಎಂದು ಹರೀಶ್ ತಿಳಿಸಿದ್ದಾರೆ.
ನವೆಂಬರ್ 8 ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ನೋಟ್‍ಗಳ ಮೇಲೆ ನಿಷೇಧ ಹೇರಿ, ಬ್ಯಾಂಕ್‍ಗಳಲ್ಲಿ ಹಳೇ ನೋಟ್ ಬದಲಾವಣೆ ಮಾಡಿಕೊಳ್ಳಲು ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಇನ್ನು ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ವಿದೇಶದಲಿದ್ದ ಭಾರತೀಯರು ಆರ್‍ಬಿಐ ಕಚೇರಿಗಳಲ್ಲಿ ಮಾರ್ಚ್ 31ರವರೆಗೆ ನೋಟ್ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು.