ಬೆಟ್ಟದಲ್ಲಿ ಸುಂದರವಾಗಿ ಅರಳುವ ಆರ್ಕಿಡ್‌ಗಳಿಗೆ (Orchid) ಮನಸೋಲದವರಿಲ್ಲ. ಸೀತಾ ಮಾತೆ ವನವಾಸದಲ್ಲಿದ್ದಾಗ ಈ ಆರ್ಕಿಡ್‌ಗಳಿಗೆ ಮನಸೋತಿದ್ದು ನಮಗೆಲ್ಲ ಗೊತ್ತೇ ಇದೆ. ಅಂತಹ ಸೌಂದರ್ಯ ಈ ಆರ್ಕಿಡ್‌ಗಳದ್ದು.
ದಟ್ಟ ಕಾನನದೊಳಗೆ ತನ್ನಪಾಡಿಗೆ ಅರಳಿ ಒಂದಷ್ಟು ದಿನಗಳ ಕಾಲ ಇದ್ದು ಉದುರಿ ಹೋಗುವ ಅದೆಷ್ಟೋ ಆರ್ಕಿಡ್‌ಗಳನ್ನು ಇಂದು ಮನೆಯಂಗಳದಲ್ಲೂ ಬೆಳೆಯಲಾಗುತ್ತಿದೆ. ಹೀಗಾಗಿ ಕೆಲವು ಆರ್ಕಿಡ್ ತಳಿಗಳು ವಿವಿಧ ಬಗೆಯ ಹೂ ಬಿಟ್ಟು, ಮನೆ ಮನದ ಅಂದವನ್ನು ಹೆಚ್ಚಿಸುತ್ತಿವೆ. ಮೊದಲೆಲ್ಲ ಆರ್ಕಿಡ್ ಬೆಳೆಯುವುದು ದೊಡ್ಡ ಸಾಹಸ ಎಂಬಂತೆ ಆಗಿತ್ತು. ಆದರೆ ಎಷ್ಟೋ ಕಡೆಗಳಲ್ಲಿ ಪುಷ್ಪ ಪ್ರೇಮಿಗಳು ಕಾಡಿನಿಂದ ತಂದು ಮನೆಯ ಅಂಗಳದಲ್ಲಿ ಬೆಳೆಯುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇನ್ನೂ ಮಲೆನಾಡಿನ ಭಾಗಗಳಲ್ಲಿ ಮಲೆಗಾಲದ ಸಮಯದಲ್ಲಿ ಕಾಣ ಸಿಗುವ ಆರ್ಕಿಡ್ ಜಾತಿಯ ಸೀತಾಳೆ ಹೂವಿಗೂ ಹಿಂದೂ ಧರ್ಮಕ್ಕೂ ವಿಶೇಷ ಸಂಬಂಧವಿದೆ. ವನವಾಸದಲ್ಲಿದ್ದಾಗ ಈ ಹೂವು ಸೀತೆಗೆ ಬಹಳ ಇಷ್ಟವಾಗಿತ್ತಂತೆ. ಹೀಗಾಗಿ ಕೆಲವರು ಇವತ್ತಿಗೂ ಈ ಹೂವನ್ನು ಸೀತಾಳೆ ದಂಡೆ ಎಂದೇ ಕರೆಯುತ್ತಾರೆ.
ಆರ್ಕಿಡ್‌ಗಳನ್ನು ವೈಜ್ಞಾನಿಕವಾಗಿ ನೋಡುವುದಾದರೆ ಆರ್ಕಿಡೇಸಿಯ ಕುಟುಂಬಕ್ಕೆ ಸೇರಿದ ಗಿಡವಾಗಿದೆ. ಆರ್ಕಿಡ್ ಕುಟುಂಬದಲ್ಲಿ ಸುಮಾರು 56 ಸಾವಿರಕ್ಕೂ ಹೆಚ್ಚು ಹೂ ಬಿಡುವಂತಹ ಸಸ್ಯಗಳಿವೆ. ಅಲ್ಲದೇ 30 ಸಾವಿರ ಪ್ರಭೇಧಗಳಿವೆ. ಈ ಪೈಕಿ ಕಾಡಿನಲ್ಲಿ ಬೆಳೆಯುವ ಜಾತಿಯ ಸಸ್ಯಗಳ ಸಂಖ್ಯೆ 32 ಸಾವಿರವಂತೆ. ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ ಭಾರತದಲ್ಲಿ ಸುಮಾರು 1,256 ಜಾತಿಯ ಆರ್ಕಿಡ್‌ಗಳಿವೆ. ಆರ್ಕಿಡ್ ಬಗ್ಗೆ ಹೇಳಬೇಕೆಂದರೆ ಇವು ಎಲ್ಲಾ ವಲಯಗಳಲ್ಲಿ ಬೆಳೆಯುತ್ತವೆಯಾದರೂ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.
ಆರ್ಕಿಡ್ ದಿನಾಚರಣೆ ಯಾಕೆ ಆಚರಿಸಲಾಗುತ್ತೆ?
ಪ್ರತಿ ವರ್ಷ ಏ.16 ರಂದು ಅಮೆರಿಕದಲ್ಲಿ ಆರ್ಕಿಡ್ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಆರ್ಕಿಡ್‌ಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಾರಿಗೆ ತರಲಾಗಿದೆ.
ಆರ್ಕಿಡ್ ದಿನದ ಇತಿಹಾಸ
ದಕ್ಷಿಣ ಕೆರೊಲಿನಾದ ದಂಪತಿಯಾದ ಮೈಕ್ ಮತ್ತು ಫೇಯ್ತ್ ಯಂಗ್ ಎಂಬವರು ಮೆಕ್ಸಿಕೋದ ಅಭಯಾರಣ್ಯದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ ಆರ್ಕಿಡ್ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ದಂಪತಿ ಆರ್ಕಿಡ್‌ಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರಿಗೆ ಎಂದಾದರೂ ಮಗು ಜನಿಸಿದರೆ ಅದಕ್ಕೆ ‘ಆರ್ಕಿಡ್’ ಎಂದು ಹೆಸರಿಡಬೇಕೆಂದು ಅವರು ನಿರ್ಧರಿಸಿದ್ದರು. ಆದರೆ, ದುರದೃಷ್ಟವಶಾತ್, ಹೆರಿಗೆಯ ಸಮಯದಲ್ಲಿ ಅವರ ಹೆಣ್ಣು ಮಗು ಸಾವನ್ನಪ್ಪುತ್ತದೆ. ಇದೇ ನೆನಪಿನಲ್ಲಿ ಅವರು 2015 ರಲ್ಲಿ ರಾಷ್ಟ್ರೀಯ ಆರ್ಕಿಡ್ ದಿನವನ್ನು ಆಚರಣೆಗೆ ನಿರ್ಧರಿಸಿ, ಫಂಡ್ ಸಂಗ್ರಹಿಸಿ, ಆರ್ಕಿಡ್‌ಗಳ ಅಧ್ಯಯನಕ್ಕೆ ಮುಂದಾದರು.
ಆರ್ಕಿಡ್ ಹೂವುಗಳ ವಿವಿಧ ಬಣ್ಣಗಳ ಮಹತ್ವ
ಆರ್ಕಿಡ್ ಹೂವುಗಳು ವಿಶೇಷವಾಗಿ ಶಕ್ತಿ ಮತ್ತು ಸೌಂದರ್ಯವನ್ನು ಪ್ರತಿನಿಧಿಸುತ್ತವೆ. ಇಷ್ಟೇ ಅಲ್ಲದೇ ಗುಲಾಬಿಯಂತೆ ಪ್ರೀತಿಯನ್ನು ಸಹ ಪ್ರತಿನಿಧಿಸುತ್ತವೆ.
ಪರ್ಪಲ್ ಆರ್ಕಿಡ್: ಅಧಿಕಾರ ಮತ್ತು ಘನತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಈ ಬಣ್ಣದ ಆರ್ಕಿಡ್ ಮೆಚ್ಚುಗೆ ಮತ್ತು ಗೌರವದ ಸಂಕೇತವಾಗಿದೆ.
ನೀಲಿ ಆರ್ಕಿಡ್: ನೀಲಿ ಆರ್ಕಿಡ್‌ಗಳು ಬಹಳ ಸುಂದರವಾಗಿರುತ್ತವೆ. ಈ ಬಣ್ಣದ ಆರ್ಕಿಡ್‌ಗಳನ್ನು ಮನಸ್ಸಿಗೆ ಹತ್ತಿರವಿರುವರಿಗೆ ಗಿಫ್ಟ್ ಆಗಿ ಕೊಡಲಾಗುತ್ತದೆ.
ಬಿಳಿ ಆರ್ಕಿಡ್ ಹೂವು: ಬಿಳಿ ಆರ್ಕಿಡ್‌ಗಳು ಆಧ್ಯಾತ್ಮದ ಸಂಬಂಧ ಹೊಂದಿವೆ, ಶುದ್ಧತೆ, ಮುಗ್ಧತೆ, ನಂಬಿಕೆ ಇತ್ಯಾದಿಗಳನ್ನು ಸೂಚಿಸುತ್ತವೆ. ಈ ಆರ್ಕಿಡ್‌ಗಳು ಮದುವೆ ಅಲಂಕಾರ, ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಇರಿಸಲಾಗುತ್ತದೆ.
ಪಿಂಕ್ ಆರ್ಕಿಡ್‌ಗಳು: ಈ ಬಣ್ಣದ ಆರ್ಕಿಡ್‌ಗಳು ಸೌಮ್ಯತೆ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತವೆ.
ಮದುವೆಗಳು ಮತ್ತು ಸೀಮಂತದಲ್ಲಿ ಆರ್ಕಿಡ್‌ಗಳನ್ನು ಉಡುಗೊರೆಯಾಗಿ ನೀಡುವುದು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಆರ್ಕಿಡ್ ಸಸ್ಯವನ್ನು ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇರಿಸುವುದರಿಂದ ಎಲ್ಲಾ ರೀತಿಯ ಯಶಸ್ಸು, ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.
ಆರ್ಕಿಡ್ ಬೆಳೆಸೋದು ಹೇಗೆ?
ಕುಂಡದಲ್ಲಿ ತೆಂಗಿನನಾರು ಅಥವಾ ಒಣಗಿದ ಪಾಚಿಯನ್ನು ಹಾಕಿ, ಎರಡು ಸಣ್ಣ ಇಟ್ಟಿಗೆ ಚೂರು, ಒಂದು ಭಾಗ ಗೋಡು ಮಣ್ಣು, ಒಂದು ಭಾಗ ಇದ್ದಿಲು ಪುಡಿ, ಒಂದು ಭಾಗ ಎಲೆಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಬೇಕು. ನಂತರ ಗಿಡನೆಟ್ಟು ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಆರ್ಕಿಡ್‌ಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳವಣಿಗೆಯನ್ನು ಆರಂಭಿಸುತ್ತವೆ. ಎರಡನೆಯ ಹಂತದಲ್ಲಿ ನವೆಂಬರ್-ಮಾರ್ಚ್ ತಿಂಗಳಲ್ಲಿ ಸುಪ್ತಾವಸ್ಥೆಯನ್ನು ತಲುಪುತ್ತವೆ. ಕೊನೆಯ ಹಂತದಲ್ಲಿ ಸುಪ್ತಾವಸ್ಥೆ ದಾಟಿ ಹೂ ಬಿಡಲು ಪ್ರಾರಂಭಿಸುತ್ತವೆ.
ಗಿಡಗಳನ್ನು ಕುಂಡದಿಂದ ವರ್ಷಕ್ಕೊಮ್ಮೆ ಬದಲಾಯಿಸಬೇಕು. ಕೆಲವು ಆರ್ಕಿಡ್‌ಗಳು ಸರಾಗವಾದ ಬಿಸಿಲು ಗಾಳಿಯನ್ನು ಹೊಂದಿಕೊಂಡು ಬೆಳೆಯುತ್ತವೆಯಾದರೂ ಮತ್ತೆ ಕೆಲವು ನೇರ ಬಿಸಿಲನ್ನು ಸಹಿಸುವುದಿಲ್ಲ. ಆರ್ಕಿಡ್‌ಗಳಿಗೆ ಅಂತಹ ರೋಗ ಏನು ಬರೋದಿಲ್ಲ. ಆದರೆ ಹೂಗಳಿಗೆ ನುಸಿ, ಜೇಡರ ಹುಳ, ಗೊಂಡೆ ಹುಳ, ಬಸವನ ಹುಳು, ಬಿಳಿ ತಿಗಣೆ ಮುಂತಾದವುಗಳು ತೊಂದರೆ ನೀಡುತ್ತವೆ. ಇವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ರಕ್ಷಿಸಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆರ್ಕಿಡ್ ಕೃಷಿ ಜನಪ್ರಿಯವಾಗುತ್ತಿದ್ದು, ಕೇವಲ ಮನೆಯ ಅಲಂಕಾರ ಮಾತ್ರವಲ್ಲದೆ, ಗಿಡಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾರೆ.