ಚೆನ್ನೈ: ಮಿಚಾಂಗ್ ಚಂಡಮಾರುತ (Michaung Cyclone) ಪ್ರಭಾವದಿಂದ ದೇಶದ ಕೆಲವೆಡೆ ಹಲವು ದಿನಗಳಿಂದ ಅಬ್ಬರದ ಮಳೆಯಾಗಿತ್ತು. ಅದರಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಹಾಗೆಯೇ ಮುಂದಿನ 7 ದಿನಗಳ ಕಾಲ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನಿಡಿದೆ.
ದಕ್ಷಿಣ ತಮಿಳುನಾಡು (Tamilnadu) ಮತ್ತು ಕೇರಳದಲ್ಲಿ (Kerala) ಭಾರೀ ಮಳೆ ಆಗ್ತಿದೆ. ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಕನ್ಯಾಕುಮಾರಿ, ತೂತುಕುಡಿ, ತಿರುನಲ್ವೇಲಿ, ತೇನ್‍ಕಾಶಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗ್ತಿದೆ. ತಿರುನಲ್ವೇಲಿಯ ಬಳಿ ಪೆಟ್ರೋಲ್ ಬಂಕ್ ಮುಳುಗಡೆ ಆಗಿದೆ. ಹಳ್ಳಕೊಳ್ಳಗಳು ತುಂಬಿ ಹರೀತಿದ್ದು, ಮಣಿಮುತಾರ್‍ನಲ್ಲಿ ಪ್ರವಾಹ ಉಂಟಾಗಿದೆ.
ಪಾಳ್ಯಂಕೊಟ್ಟೈ ಎಂಬಲ್ಲಿ ದಾಖಲೆಯ 260 ಮಿಲಿಮೀಟರ್ ಮಳೆಯಾಗಿದೆ. ತೂತುಕುಡಿ ಜಿಲ್ಲೆಯ ಶ್ರೀವೈಕುಂಠಂನಲ್ಲಿ ಇಂದು ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಸುಮಾರು 500 ಮಿ.ಮಿ ಮಳೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಹೇಳಿದೆ.
ಸೋಮವಾರ ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ರಾಮನಾಥಪುರಂ, ಶಿವಗಂಗಾ, ಪುದುಕೊಟ್ಟೈ, ತಂಜಾವೂರು, ವಿರುಧನಗರ ಮತ್ತು ಥೇಣಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ನೀಡಿದೆ. ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ, ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರ ದಕ್ಷಿಣ ತಮಿಳುನಾಡು, ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಅಲ್ಲಲ್ಲಿ ಮಿಂಚು, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬುಧವಾರದಿಂದ ಶನಿವಾರದವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಇತ್ತ ಉತ್ತರಭಾರತದಲ್ಲಿ ಕೊರೆವ ಚಳಿ, ಹಿಮ ಮಳೆ ಆಗುತ್ತಿದೆ. ದೆಹಲಿ ಸೇರಿ ಉತ್ತರ ಭಾರತದಾದ್ಯಂತ ಚಳಿ ಮತ್ತಷ್ಟು ಹೆಚ್ಚಾಗಿದೆ. ದಟ್ಟ ಮಂಜು ಆವರಿಸಿರುವ ಕಾರಣ ವಿಸಿಬಲಿಟಿಯೂ ಕಡಿಮೆ ಆಗಿದೆ. ಇದ್ರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಜನ ಪರದಾಡಿದ್ರು. ಇತ್ತ ಬೆಂಗಳೂರಿನಲ್ಲಿ ಚಳಿಯ ವಾತಾವರಣ ಕಂಡುಬಂದಿದೆ.