ಅತಿ ಬುದ್ಧಿವಂತಿಕೆ ಪ್ರದರ್ಶಿಸಿ ಸಿಎಂ ಕುರ್ಚಿಗೆ ಕೃಷ್ಣ ಭೈರೇಗೌಡ ಟವಲ್ ಹಾಕುತ್ತಿದ್ದಾರೆ: ಅಶೋಕ್ ವ್ಯಂಗ್ಯ

Public TV
3 Min Read
R ASHOK

– ಬೆಂಗಳೂರಿನ ಜನತೆ ನಮ್ಮ ತೆರಿಗೆ ನಮ್ಮ ಹಕ್ಕು ಎಂದರೆ ಏನು ಮಾಡುತ್ತೀರಿ?

ಬೆಂಗಳೂರು: ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಮೂಲಕ ಹೈಕಮಾಂಡ್ ಗಮನ ಸೆಳೆದು ಮುಖ್ಯಮಂತ್ರಿ ಕುರ್ಚಿಗೆ ನನ್ನದೂ ಒಂದು ಇರಲಿ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಟವಲ್ ಹಾಕುತ್ತಿದ್ದಾರೆ. ರೈತರ (Farmers) ಬಗ್ಗೆ ಕೀಳರಿಮೆ ಇರುವ ಕೃಷ್ಣ ಭೈರೇಗೌಡರು ಐದು ವರ್ಷಗಳ ಕಾಲ ಕೃಷಿ ಸಚಿವರಾಗಿದ್ದು ಈ ರಾಜ್ಯದ ದೌರ್ಭಾಗ್ಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಟೀಕಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ಬಗ್ಗೆ ಆಡಿದ ಮಾತಿನ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಪ್ರತಿಕ್ರಿಯಿಸಿದರು.

ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು ‘ಕನಿಷ್ಠ ಜ್ಞಾನ’ ಎಂದು ರೈತರನ್ನು ಕೃಷ್ಣ ಭೈರೇಗೌಡರು ಹೀಯಾಳಿಸಿದ್ದಾರೆ. ಎಲ್ಲರಿಗೂ ಅವರಂತೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಷ್ಟು ಅನುಕೂಲ ಇರುವುದಿಲ್ಲ. ರಾಜಕಾರಣದಲ್ಲಿ ಕುಟುಂಬದ ಹಿನ್ನೆಲೆ ಇಲ್ಲದಂತಹ ನಮ್ಮಂತಹ ಸಾಮಾನ್ಯರೂ ಇದ್ದೀವಿ. ರೈತರ ಬಗ್ಗೆ ಇಂತಹ ಕೀಳರಿಮೆ ಇರುವ ತಮ್ಮಂತಹವರು ಐದು ವರ್ಷಗಳ ಕಾಲ ರಾಜ್ಯದ ಕೃಷಿ ಸಚಿವರಾಗಿದ್ದೀರಲ್ಲ, ಅದೇ ನಮ್ಮ ರಾಜ್ಯದ ದೌರ್ಭಾಗ್ಯ ಎಂದು ಅಶೋಕ್ ಹೇಳಿದ್ದಾರೆ.

Krishna Byre Gowda

ಜಿಎಸ್‌ಟಿ (GST) ಸಭೆಯಲ್ಲಿ ತೆರಿಗೆ ಹಂಚಿಕೆ ಬಗ್ಗೆ ಅಧಿಕೃತವಾಗಿ ಚರ್ಚೆ ನಡೆಯುವುದಿಲ್ಲ ಎಂಬ ಅರಿವು ನನಗೂ ಇದೆ. ಆದರೆ ಜಿಎಸ್‌ಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಅಥವಾ ಇನ್ಯಾರಾದರೂ ಪ್ರತಿನಿಧಿ ಸಚಿವರು ಬಂದಿರುತ್ತಾರೆ ಅಲ್ಲವೇ? ಇಂತಹ ವೇದಿಕೆಯಲ್ಲಿ ಅನೌಪಚಾರಿಕವಾಗಿ ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಿ ಒಂದು ಒಮ್ಮತ ಸೃಷ್ಟಿಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ನನ್ನ ಮಾತಿನ ಅರ್ಥ ಇದಾಗಿತ್ತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ-ವಯನಾಡಿನಿಂದ ಕಣಕ್ಕೆ

ಕೇರಳದಲ್ಲಿ ಇತ್ತೀಚೆಗೆ ಐದು ಬಿಜೆಪಿಯೇತರ ಸರ್ಕಾರಗಳ ಪ್ರತಿನಿಧಿಗಳು ಒಟ್ಟಿಗೆ ಸೇರಿ ಸಭೆ ಮಾಡಿದ್ದರು. ಅದು ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸುವ ವೇದಿಕೆಯೇ? ವೇದಿಕೆಗಳ ಮೇಲೆ ರಾಜಕೀಯ ಭಾಷಣ ಮಾಡಿ ಕೇಂದ್ರ ಸಚಿವರಿಗೆ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕುತ್ತೀರಲ್ಲ, ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಲು ಅದು ವೇದಿಕೆಯೇ? ದೆಹಲಿ ಚಲೋ ಅಂತ ಬೀದಿನಾಟಕ ಮಾಡಿ, ಜಂತರ್ ಮಂತರ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರಲ್ಲ, ತೆರಿಗೆ ಹಂಚಿಕೆ ಬಗ್ಗೆ ಚರ್ಚೆ ಮಾಡಲು ಅದು ವೇದಿಕೆಯೇ? ಚುನಾವಣೆ ಬಂದರೆ ಸಾಕು, ಸರ್ಕಾರಕ್ಕೆ ಒಂಚೂರು ಮುಜುಗರ ಆದರೆ ಸಾಕು, ಜನರ ಗಮನ ಬೇರೆಡೆ ಸೆಳೆಯಲು ‘ನನ್ನ ತೆರಿಗೆ ನನ್ನ ಹಕ್ಕು’ ಅಂತ ನಾಟಕ ಶುರು ಮಾಡುತ್ತೀರಲ್ಲ, ಸಾಮಾಜಿಕ ಜಾಲತಾಣಗಳು ತೆರಿಗೆ ಹಂಚಿಕೆ ಬಗ್ಗೆ ಚರ್ಚೆ ಮಾಡಲು ವೇದಿಕೆಯೇ? ಈ ತಂತ್ರಗಾರಿಕೆ, ಟೂಲ್ ಕಿಟ್ ರಾಜಕಾರಣ ಜನಸಾಮಾನ್ಯರಿಗೆ ಅರ್ಥ ಆಗೋದಿಲ್ಲ ಅಂತ ಎಣಿಸಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

GST MEETING

ರಾಜ್ಯದ ಹಿತಾಸಕ್ತಿ ಕಾಪಾಡಬೇಕು, ರಾಜ್ಯದ ಬೊಕ್ಕಸಕ್ಕೆ ನಾಲ್ಕು ಕಾಸು ಹೆಚ್ಚು ಬರಬೇಕು ಎನ್ನುವ ಉದ್ದೇಶ ತಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ಇದ್ದಿದ್ದರೆ, ತಾವು ಮತ್ತು ತಮ್ಮ ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುವ ರೀತಿಯೇ ಬೇರೆ ಇರುತ್ತಿತ್ತು. ಆದರೆ ಸತ್ಯ ಏನೆಂದರೆ, ನಿಮಗೆ ಅದ್ಯಾವ ಸದುದ್ದೇಶವೂ ಇಲ್ಲ. ತಮಗೆ ಬೇಕಾಗಿರುವುದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಗೊಬೆ ಕೂರಿಸುವುದು ಮಾತ್ರ. ಆ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು, ತಪ್ಪುಗಳನ್ನು ಮುಚ್ಚಿಕೊಳ್ಳುವುದು, ಜನರ ಗಮನ ಬೇರೆಡೆ ಸೆಳೆಯುವುದು, ಬಿಜೆಪಿ ವಿರುದ್ಧ ಒಂದು ಕಟ್ಟುಕಥೆ ಸೃಷ್ಟಿಸುವುದು ಇವರ ಉದ್ದೇಶ ಎಂದು ಅವರು ದೂರಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮನೆಹಾಳು ಕೆಲಸ ಮಾಡಬಾರದು. ಇವತ್ತು ನೀವು “ನಮ್ಮ ತೆರಿಗೆ ನಮ್ಮ ಹಕ್ಕು” ಎನ್ನುತ್ತೀರಿ. ನಾಳೆ ಬೆಂಗಳೂರಿನ ಜನತೆ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಮುಂದೊಂದು ದಿನ ಮಹದೇವಪುರದ ಜನ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗೆ ಮುಂದುವರಿದರೆ ಪ್ರತಿಯೊಂದು ಧರ್ಮ, ಜಾತಿಯವರು ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗಾದರೆ ಇದಕ್ಕೆ ಕೊನೆ ಎಲ್ಲಿ ಎಂದು ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಇದೆಲ್ಲಾ ತಮಗೆ ಗೊತ್ತಿಲ್ಲ ಎಂದೇನಿಲ್ಲ. ಬಹುಶಃ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಮೂಲಕ ಹೈಕಮಾಂಡ್ ಗಮನ ಸೆಳೆದು ಮುಖ್ಯಮಂತ್ರಿ ಕುರ್ಚಿಗೆ ನನ್ನದೂ ಒಂದು ಇರಲಿ ಅಂತ ಟವಲ್ ಹಾಕುತ್ತಿರಬಹುದು. ದುರಾಡಳಿತದಿಂದ ಬೇಸತ್ತಿರುವ ಕರ್ನಾಟಕಕ್ಕೆ ನಿಮ್ಮಂತಹ ಸುಶಿಕ್ಷಿತ, ಸಭ್ಯ, ಬುದ್ಧಿವಂತ ನಾಯಕರು ಮುಖ್ಯಮಂತ್ರಿ ಆದರೆ ಒಳ್ಳೆಯದೇ! ಆದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್‌ಗೆ ಬೇಕಾಗಿರುವುದು ‘ಸಂಪನ್ಮೂಲ’ ಒದಗಿಸುವ ಮಹಾನಾಯಕರೇ ಹೊರತು ನಿಮ್ಮಂತಹ ಸಂಪನ್ಮೂಲ ವ್ಯಕ್ತಿಗಳಲ್ಲ. ಒಟ್ಟಿನಲ್ಲಿ ನಿಮಗೆ ಶುಭವಾಗಲಿ ಎಂದು ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

 

Share This Article