ಹಾಸನ: ಬೇಲೂರು ಭಾಗದ ಜನರ ನಿದ್ದೆಗೆಡಿಸಿದ್ದ ಹಾಗೂ ಅರಣ್ಯ ಇಲಾಖೆಗೆ (Forest Department) ತಲೆನೋವಾಗಿದ್ದ ದೈತ್ಯಾಕಾರದ ಪುಂಡಾನೆ ವಿಕ್ರಾಂತ್‌ನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸತತ ಮೂರು ದಿನಗಳಿಂದ ವಿಕ್ರಾಂತ್ ಸೆರೆ ಹಿಡಿಯಲು ಏಳು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನಪಟ್ಟಿದ್ದರು. ಇದೀಗ ವಿಕ್ರಾಂತ್ (Vikrant) ಜೊತೆಗಿದ್ದ ಭೀಮನಿಂದ ಬೇರ್ಪಡಿಸಿ ಅರವಳಿಕೆ ನೀಡಿ ಕಾಡಾನೆಯನ್ನು ಇಟಿಎಫ್ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಮಂಗಳವಾರದಿಂದ ಬೇಲೂರಿನ (Beluru) ಕಾನನಹಳ್ಳಿ ಗ್ರಾಮದ ಬಳಿಯಿರುವ ಅರಣ್ಯದ ಬಳಿ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ವಿಕ್ರಾಂತ್ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಮೊದಲ ದಿನ 6 ಗಂಟೆಗಳ ಕಾಲ ನಿರಂತರ ಪ್ರಯತ್ನಪಟ್ಟರೂ, ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಿ ದಟ್ಟ ಅರಣ್ಯದೊಳಗೆ ಸೇರಿಕೊಂಡಿತ್ತು. ಎರಡನೇ ದಿನದ ಕಾರ್ಯಾಚರಣೆ ವೇಳೆ ಭೀಮ ಎಂಟ್ರಿಕೊಟ್ಟಿದ್ದರಿಂದ ಕೆಲಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿ, ಪುನಃ ಕಾರ್ಯಾಚರಣೆ ನಡೆಸಿದ್ದರು. ಗುಂಪಿನೊಳಗಿದ್ದ ವಿಕ್ರಾಂತ್‌ನನ್ನು ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಹಾಗೂ ಇಟಿಎಫ್ ಸಿಬ್ಬಂದಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ಕಾಡಾನೆ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!
ವಿಕ್ರಾಂತ್ ಸೆರೆಯಾಗಿದ್ದು ಹೇಗೆ?
ಗುರುವಾರ ಕಾರ್ಯಾಚರಣೆ ವೇಳೆ, ಎಟಿಎಫ್ (ETF) ಸಿಬ್ಬಂದಿ ಭೀಮನಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕೆಲಕಾಲ ನಿತ್ರಾಣಗೊಳ್ಳುವಂತೆ ಮಾಡಿ ವಿಕ್ರಾಂತ್‌ನನ್ನು ಬೇರ್ಪಡಿಸಿದರು. ಬಳಿಕ ವಾಟೀಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ನಿಂತಿದ್ದ ವಿಕ್ರಾಂತ್ ಬಳಿಗೆ ಸಾಕಾನೆಗಳು ತೆರಳಿದ್ದು ಅರವಳಿಕೆ ತಜ್ಞರಾದ ರಮೇಶ್ ಚುಚ್ಚುಮದ್ದು ನೀಡಿದರು. ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಕಾಫಿ ತೋಟದೊಳಗಿಂದ ವೇಗವಾಗಿ ಓಡಲಾರಂಭಿಸಿದ ವಿಕ್ರಾಂತ್ ಅರೇಹಳ್ಳಿ-ಸಕಲೇಶಪುರ ರಸ್ತೆ ದಾಟಿ ಕಾಫಿ ತೋಟಕ್ಕೆ ಬಂದು ಕುಸಿದು ಬಿದ್ದಿತ್ತು. ಬಳಿಕ ಸಾಕಾನೆಗಳ ಸಹಾಯದಿಂದ ಆನೆಯನ್ನು ಸಿಬ್ಬಂದಿ ಸೆರೆಹಿಡಿದಿದ್ದಾರೆ.
ವಾಟೀಹಳ್ಳಿ ಬಳಿ ಇಟಿಎಫ್ ಸಿಬ್ಬಂದಿ ವಿಕ್ರಾಂತ್ ಇರುವ ಸ್ಥಳವನ್ನು ಗುರುತು ಮಾಡುತ್ತಿದ್ದ ವೇಳೆ, ಸಿಬ್ಬಂದಿಯನ್ನು ಈ ಕಾಡಾನೆ ಅಟ್ಟಾಡಿಸಿತ್ತು. ಈ ವೇಳೆ ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬ್ಬಂದಿ ಪಾರಾಗಿದ್ದರು. ಇದನ್ನೂ ಓದಿ: ಹಾಟ್ ಅವತಾರ ತಾಳಿದ ಜಾಕ್ವೆಲಿನ್- ನಟಿಯ ಲುಕ್‌ಗೆ ಪಡ್ಡೆಹುಡುಗರು ಫಿದಾ