ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ ಒಟ್ಟು 9 ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಭಾರತ ಅಧಿಕೃತವಾಗಿ ತಿಳಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಬಲವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಒಂಬತ್ತು ಗುರಿಗಳನ್ನು ಆಯ್ಕೆ ಮಾಡಲಾಗಿತ್ತು.ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಗುರಿಗಳನ್ನು ಆಯ್ಕೆ ಮಾಡಲಾಗಿತ್ತು.
ಜನರು ಮತ್ತು ಪಾಕ್ ಮಿಲಿಟರಿ ನೆಲೆಗಳ ಮೇಲೆ ಭಾರತ ಯಾವುದೇ ದಾಳಿ ನಡೆಸಿಲ್ಲ. ಉಗ್ರರ ನೆಲೆಗಳ ಮೇಲೆ ಮಾತ್ರ ಈ ದಾಳಿ ನಡೆದಿದೆ. ಮುಂಬೈ ದಾಳಿಕೋರರಾದ ಕಸಬ್, ಹೇಡ್ಲಿ ತರಬೇತಿ ಪಡೆದ ಕ್ಯಾಂಪ್ ಧ್ವಂಸ ಮಾಡಲಾಗಿದೆ.
ಎರಡು ದೇಶಗಳ ಮಧ್ಯೆ ಈಗಲೂ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣ ಈಗ ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ನಮ್ಮ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರು ಮತ್ತು ಪಾಕಿಸ್ತಾನದಲ್ಲಿರುವ ಸಂಯೋಜಕರ ನಡುವಿನ ಸಂವಹನ ಪತ್ತೆ ಹಚ್ಚಿತ್ತು. ಈ ಕಾರಣಕ್ಕೆ ಇಂದು ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ತನ್ನ ಹಕ್ಕನ್ನು ಚಲಾಯಿಸಿದೆ.