ನವದೆಹಲಿ: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ (Operatiuon Sindoor) ಕಾರ್ಯಾಚರಣೆಯ ಬಳಿಕ ಮೋದಿ ಇಲ್ಲಿಯವರೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ. ಹೀಗಾಗಿ ಇಂದು ಏನು ಹೇಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಇಂದು ಸಂಜೆ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಜೊತೆ ಸಭೆ ನಡೆಯಲಿದೆ. ಕದನ ವಿರಾಮ ಘೋಷಣೆಯಾದ ನಂತರ ಎರಡು ದೇಶಗಳ ಡಿಜಿಎಂಒಗಳು ಇಂದು ಮೊದಲ ಬಾರಿಗೆ ಮಾತನಾಡಲಿದ್ದಾರೆ. ಪೂರ್ವ ನಿಗದಿ ಪ್ರಕಾರ ಇಂದು ಮಧ್ಯಾಹ್ನ ಡಿಜಿಎಂಒ ಸಭೆ ನಡೆಯಬೇಕಿತ್ತು. ಆದರೆ ಈ ಸಭೆ ಇಂದು ಸಂಜೆಗೆ ಮುಂದೂಡಿಕೆಯಾಗಿದೆ.
ಈ ಹಿಂದೆ ಬಿಹಾರದಲ್ಲಿ ಮಾತನಾಡಿದ್ದ ಮೋದಿ, ಪಹಲ್ಗಾಮ್‌ನಲ್ಲಿ ಮೃತಪಟ್ಟವರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಉಗ್ರರು ಮತ್ತು ಉಗ್ರರಿಗೆ ನೆರವು ನೀಡುವವರ ಕಲ್ಪನೆ ಮಾಡದ ರೀತಿಯಾಗಿ ನಾವು ತಿರುಗೇಟು ನೀಡುತ್ತೇವೆ ಎಂದು ಗುಡುಗಿದ್ದರು.
ಇಂದು ಪ್ರಧಾನಿ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಅನಿಲ್ ಚೌಹಾಣ್ ಮತ್ತು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಪ್ರಸ್ತುತ ಪರಿಸ್ಥಿತಿಯ ಕುರಿತು ನಿರ್ಣಾಯಕ ಸಭೆ ನಡೆಸಿದ್ದಾರೆ.