ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಭಾರತ ತಡರಾತ್ರಿ 1:44ಕ್ಕೆ ದಾಳಿ ನಡೆಸಿದೆ. ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ತಾನ (Pakistan) ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಏರ್ ಸ್ಟ್ರೈಕ್ (Air Strike) ನಡೆದಿದೆ. ಈ ದಾಳಿಗಳಲ್ಲಿ ಮೂವತ್ತಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವುದಾಗಿ ಕೆಲ ವರದಿಗಳು ತಿಳಿಸಿವೆ.
Justice is Served.
Jai Hind! pic.twitter.com/Aruatj6OfA
— ADG PI – INDIAN ARMY (@adgpi) May 6, 2025
ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಗುರಿ ಮಾಡಲಾದ 9 ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.
ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದವು. ಪಾಕಿಸ್ತಾನದಲ್ಲಿರುವ ಗುರಿಗಳಲ್ಲಿ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್‌ಕೋಟ್ ಸೇರಿವೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ನಿಖರ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ.
ಭಾರತದ 26 ಸಹೋದರಿಯರ ಕುಂಕುಮ ಅಳಿಸಿದ್ದಕ್ಕೆ ನಡೆಸಿದ ಪ್ರತೀಕಾರಕ್ಕೆ ʼಆಪರೇಷನ್ ಸಿಂಧೂರʼ ಎಂಬ ಹೆಸರನ್ನು ಇಡಲಾಗಿದೆ. ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೋಗಳು ಹರಿದಾಡುತ್ತಿವೆ.
ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸುವುದಾಗಿ ಭಾರತ ಪ್ರತಿಜ್ಞೆ ಮಾಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.