-ಇದು ಆಪರೇಷನ್ ಕಮಲ ಅಲ್ಲ ಆಪರೇಷನ್ ಲೋಟಸ್ ರಾಕೆಟ್
ಬೆಂಗಳೂರು: ಒಂದೇ ಎಸೆತಕ್ಕೆ ಒಂದೂವರೆ ಡಜನ್ ವಿಕೆಟ್ ಪತನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದು ಬಿಜೆಪಿಯ ಕಟ್ಟಕಡೆಯ ಆಪರೇಷನ್ ಆಗಿದೆ. ಈ ಮಹಾಪತನ ನೂರಕ್ಕೆ ನೂರು ಖಚಿತವಾಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ.
ಬಿಜೆಪಿ ತನ್ನ `ಆಪರೇಷನ್ ಕಮಲ’ಕ್ಕೆ `ಆಪರೇಷನ್ ಲೋಟಸ್ ರಾಕೆಟ್’ ಹೊಸ ಹೆಸರಿಟ್ಟು ಕಾರ್ಯಾಚರಣೆಗಿಳಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಬರೋಬ್ಬರಿ 18 ಶಾಸಕರಿಂದ ರಾಜೀನಾಮೆ ಸಾಧ್ಯತೆ ಇದ್ದು, ಇನ್ನೆರಡು ದಿನದಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಲಿದೆ.
Advertisement
Advertisement
ಶಾಸಕರ ರಾಜೀನಾಮೆ:
ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಟ್ಟು 18 ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ ಪಕ್ಕವಾಗಿದ್ದು, ಅಧಿವೇಶನಕ್ಕೂ ಮೊದಲು 18 ಮಂದಿ ಶಾಸಕರಿಂದ ರಾಜೀನಾಮೆ ಸಾಧ್ಯತೆ ಇದೆ. ರಾಜೀನಾಮೆಗೂ ಮೊದಲು ಅತೃಪ್ತರ ಕೂಟ ರಾಜ್ಯಪಾಲರನ್ನು ಭೇಟಿ ಆಗಲಿದೆ. ನಮಗೆ ಈ ಸರ್ಕಾರದ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲ. ನಾವು ಸ್ಪೀಕರ್ ಬಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಆದರೆ ಸ್ಪೀಕರ್ ಬಳಿ ಹೋಗಿ ರಾಜೀನಾಮೆ ಕೊಡಲು ನೀವು ಪೊಲೀಸ್ ಭದ್ರತೆ ಕೊಡಬೇಕು ಎಂದು ರಾಜ್ಯಪಾಲರ ಬಳಿ ಮಾತನಾಡಲಿದ್ದಾರೆ. ನಂತರ ಶಾಸಕರ ಮನವಿಯಂತೆ ಅಗತ್ಯ ಪೊಲೀಸ್ ರಕ್ಷಣೆಗೆ ಡಿಜಿಪಿಗೆ ರಾಜ್ಯಪಾಲರು ಸೂಚಿಸಬಹುದು ಎಂದು ಹೇಳಲಾಗುತ್ತಿದೆ.
Advertisement
Advertisement
ಶಾಸಕರು ರಾಜ್ಯಪಾಲರ ಭೇಟಿ ಬಳಿಕ ಪೊಲೀಸರ ರಕ್ಷಣೆಯೊಂದಿಗೆ ಸೀದಾ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಒಂದೇ ಟೈಮ್‍ಗೆ ಕಾಂಗ್ರೆಸ್-ಜೆಡಿಎಸ್ ಶಾಸಕರಿಂದ ರಾಜೀನಾಮೆ ಪತ್ರ ಸಲ್ಲಿಕೆಗೆ ತೀರ್ಮಾನಿಸಿದ್ದು, ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ, ಸ್ವ-ಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇವೆ. ನಮ್ಮ ರಾಜೀನಾಮೆಯನ್ನ ನೀವು ಅಂಗೀಕಾರ ಮಾಡಲೇಬೇಕು ಎಂದು ಖುದ್ದು ಸ್ಪೀಕರ್ ಮುಂದೆ ಹಾಜರಾಗಿ ರಾಜೀನಾಮೆ ಪತ್ರ ಕೊಟ್ಟು ಶಾಸಕರಿಂದ ಅಲ್ಲೇ ವಿವರಣೆ ನೀಡುವ ಸಾಧ್ಯತೆಯೂ ಇದೆ.
ಅಖಾಡಕ್ಕೆ ಬಿಜೆಪಿ ಎಂಟ್ರಿ:
ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ಅಧಿಕೃತವಾಗಿ ಬಿಜೆಪಿ ಅಖಾಡಕ್ಕೆ ಎಂಟ್ರಿಯಾಗಲಿದ್ದು, ಶಾಸಕರ ರಾಜೀನಾಮೆ ಬಳಿಕ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಆಗಲಿದೆ. ಈ ಸರ್ಕಾರಕ್ಕೆ ಬಹುಮತ ಇಲ್ಲ, ಅವರ ಶಾಸಕರೇ ರಾಜೀನಾಮೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಸಂಖ್ಯಾಬಲವೇ ಇಲ್ಲ. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯಬಾರದು. ಕುಮಾರಸ್ವಾಮಿ ಸರ್ಕಾರ ರಾಜೀನಾಮೆ ಕೊಡಬೇಕು, ಇಲ್ಲವೇ ವಿಶ್ವಾಸಮತ ಸಾಬೀತಿಗೆ ಸೂಚಿಸಿ ತಕ್ಷಣವೇ ಬಿಜೆಪಿ ಮಧ್ಯಪ್ರವೇಶಿಸಿ ವಿಶ್ವಾಸಮತ ಸಾಬೀತಿಗೆ ಸಿಎಂ ಕುಮಾರಸ್ವಾಮಿ ಆದೇಶ ನೀಡಿ ರಾಜ್ಯಪಾಲರ ಮುಂದೆ ಬಿಜೆಪಿ ನಿಯೋಗದಿಂದ ಬೇಡಿಕೆ ಸಾಧ್ಯತೆ ಇದೆ.
ಒಂದು ವೇಳೆ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ ಆಗ ಸರ್ಕಾರ ಅಲ್ಪಮತಕ್ಕೆ ಕುಸಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ರಾಜ್ಯಪಾಲರು ವಿವರಣೆ ಕೇಳಲಿದ್ದಾರೆ. ನಿಮ್ಮ ಮೈತ್ರಿಕೂಟದ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ನಿಮ್ಮ ಸರ್ಕಾರಕ್ಕೆ ಈಗ ಬಹುಮತ ಇಲ್ಲ. ಈ ಬೆಳವಣಿಗೆ ಬಗ್ಗೆ ಏನಂತೀರಿ? ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಲಿದ್ದಾರೆ. ಬಳಿಕ ನೀವು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕಾಗುತ್ತದೆ ಎಂದು ಹೇಳಿ ಬಹುಮತ ಸಾಬೀತಿಗೆ ಕುಮಾರಸ್ವಾಮಿಗೆ ರಾಜ್ಯಪಾಲರು ಗಡುವು ಕೊಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv