ಬೆಂಗಳೂರು: ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯನವರ ಸಲಹೆಯನ್ನು ಪಾಲಿಸುತ್ತಿದ್ದರೆ ಶಾಸಕರ ಬಂಡಾಯ, ಆಪರೇಷನ್ ಕಮಲ ನಡೆಯುತ್ತಿರಲಿಲ್ಲ.
ಹೌದು. ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲೇ ಆಪರೇಷನ್ ಕಮಲದ ಭೀತಿ ಎದುರಾಗಿತ್ತು. ತೆರೆಮರೆಯಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತಿರುವುದನ್ನು ಅರಿತ ಸಿದ್ದರಾಮಯ್ಯ ಸಿಎಂ ಎಚ್‍ಡಿಕೆಯಲ್ಲಿ, ಬಿಜೆಪಿಯವರು ಕೇಳುವ ಮುನ್ನವೇ ಒಂದು ಬಾರಿ ವಿಶ್ವಾಸ ಮತಯಾಚಿಸಿ ಬಿಡಿ. ಆಗ 6 ತಿಂಗಳು ಸರ್ಕಾರ ಸುಭದ್ರವಾಗಿರುತ್ತದೆ. ಯಾವ ಗಲಾಟೆಗಳಿಗೆ ಆಸ್ಪದ ಇರುವುದಿಲ್ಲ. ಆಪರೇಷನ್ ಕಮಲದ ಭೀತಿಯೂ ಇರುವುದಿಲ್ಲ ಎಂದು ಸಲಹೆ ನೀಡಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
Advertisement
ಸಿದ್ದರಾಮಯ್ಯ ಅವರ ಸಲಹೆಯನ್ನು ಅಂದು ಕೇಳಿಯೂ ಕೇಳಿಸದಂತೆ ಸಿಎಂ ಕುಮಾರಸ್ವಾಮಿ ನಡೆದುಕೊಂಡಿದ್ದರು. ಈ ಸಲಹೆಯನ್ನು ಮಾನ್ಯ ಮಾಡದ ಪರಿಣಾಮವೇ ಆಪರೇಷನ್ ಕಮಲ, ಆಪರೇಷನ್ ಗುರುಗ್ರಾಮ, ಬಿಡದಿ ರೆಸಾರ್ಟ್ ಕಿತ್ತಾಟ, ಆಪರೇಷನ್ ಮೌನ ಕ್ರಾಂತಿ ಬೆಳವಣಿಗೆಗಳು ನಡೆದು ಈಗ ಆಪರೇಷನ್ ಲೋಟಸ್ ರಾಕೆಟ್ ನಡೆಯುವ ಹಂತಕ್ಕೆ ಬಂದಿದೆ.
Advertisement
ಸರ್ಕಾರ ರಚಿಸುವಾಗಲೇ ಒಂದು ಬಾರಿ ವಿಶ್ವಾಸ ಮತಯಾಚನೆ ನಡೆದಿದೆ. ಮತ್ತೆ ಯಾಕೆ ಕೇಳಬೇಕು? ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ನಮ್ಮ ಸರ್ಕಾರ ಸಂಪೂರ್ಣ ಬೆಂಬ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಕುಮಾರಸ್ವಾಮಿ ಇದ್ದರು. ಆದರೆ ಜನವರಿಯಲ್ಲಿ ನಡೆದ ಬೆಳವಣಿಗೆಯೇ ಬೇರೆಯಾಗಿದ್ದು ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ.
Advertisement
ಕುಮಾರಸ್ವಾಮಿ ಒಂದು ವೇಳೆ ಸಿದ್ದರಾಮಯ್ಯ ಸಲಹೆಯನ್ನು ಪರಿಗಣಿಸಿ ವಿಶ್ವಾಸ ಮತಯಾಚನೆ ಮಾಡಿದ್ದರೆ ಲೋಕಸಭಾ ಚುನಾವಣೆ ನಡೆಯುವವರೆಗೂ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಎನ್ನುವ ವಿಚಾರದ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ಈಗ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv