ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಸಜ್ಜಾಗಿ ನಿಂತಂತೆ ಕಾಣುತ್ತಿದೆ. ಆದರೆ ಕಾಂಗ್ರೆಸ್ ಶಾಸಕರನ್ನ ಬಿಜೆಪಿ ನಾಯಕರು ಹೇಗೆ ಆಪರೇಷನ್ ಮಾಡ್ತಾ ಇದಾರೆ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿದೆ.
ರಾಜ್ಯದಲ್ಲೆ ಅತಿ ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವ ಬಳ್ಳಾರಿಯ 6 ಶಾಸಕರ ಪೈಕಿ 5 ಕಾಂಗ್ರೆಸ್ ಶಾಸಕರನ್ನ ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಲು ಹೇಗೆ ಮಾಸ್ಟರ್ ಪ್ಲಾನ್ ಮಾಡಿದೆ ಅನ್ನೋ ಎಕ್ಸ್‍ಕ್ಲೂಸಿವ್ ಸ್ಟೋರಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಒಂದೆಡೆ ಸಚಿವ ರಮೇಶ್ ಜಾರಕಿಹೊಳಿ ಮೂಲಕ ಕೈ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಶಾಸಕ ಶ್ರೀರಾಮುಲು ಸಹ ಮಾಜಿ ಸಚಿವ ಸಂತೋಷ್ ಲಾಡ್ ಮೂಲಕ ಕೈ ಶಾಸಕರನ್ನ ಬಿಜೆಪಿಗೆ ಸೆಳೆಯಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಸದ್ಯ ವಿದೇಶದಲ್ಲಿರುವ ಮಾಜಿ ಸಚಿವ ಸಂತೋಷ್ ಲಾಡ್ ರೊಂದಿಗೆ ಸತತ ಸಂಪರ್ಕದಲ್ಲಿರುವ ಶ್ರೀರಾಮುಲು ಬಳ್ಳಾರಿಯ 5 ಶಾಸಕರನ್ನ ಸೆಳೆಯಲು ಮುಂದಾಗಿದ್ದಾರಂತೆ. ಸಂತೋಷ್ ಲಾಡ್ ರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಹೊಸಪೇಟೆ ಶಾಸಕ ಆನಂದಸಿಂಗ್. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಜೆಡಿಎಸ್ ತೊರೆದು ಕೈ ಪಾಳಯ ಸೇರಿದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್, ಕಂಪ್ಲಿಯ ಜಿ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಇವರೆಲ್ಲರೂ ಸಂತೋಷ್ ಲಾಡ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು.
ಬಳ್ಳಾರಿಯ 5 ಶಾಸಕರನ್ನು ಸೆಳೆಯಲು ಶ್ರೀರಾಮುಲು ವಿದೇಶದಲ್ಲಿರುವ ಸಂತೋಷ್ ಲಾಡ್ ಜೊತೆ ಸತತವಾಗಿ ಸಂಪರ್ಕದಲ್ಲಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿಯೊಂದಿಗೆ ಕೆಲ ಶಾಸಕರು ಬಿಜೆಪಿ ಸೇರ್ಪಡೆಯಾಗೋದು ಖಚಿತವಾದರೆ, ಬಳ್ಳಾರಿ ಜಿಲ್ಲೆಯ 5 ಶಾಸಕರನ್ನ ಸಂತೋಷ ಲಾಡ್ ಮೂಲಕವೇ ಬಿಜೆಪಿಗೆ ಕರೆತರಲು ಶ್ರೀರಾಮುಲು ಸಜ್ಜಾಗಿ ನಿಂತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ.
ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ಒಂದು ಪಾನ್ ಮೂವ್ ಮಾಡಲಿ ಮುಂದೇನು ಮಾಡಬೇಕೆಂದು ನಮಗೆ ಗೊತ್ತಿದೆ ಅಂತಾ ಅಂದಿದ್ದಾರೆ. ಇತ್ತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ 6 ಮಂದಿ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳಿದ್ದಾರೆ. ಇಬ್ಬರ ಹೇಳಿಕೆ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಚೌತಿ ನಂತರ ಸ್ವಲ್ಪ ಹುಷಾರಾಗಿರಿ, ಯಾರಿಗೂ ಹೆದರಬೇಡಿ. ನಿಮ್ಮನ್ನ ಯಾವಾಗ ಬೇಕಾದರೂ ನಾವು ಸಂಪರ್ಕ ಮಾಡುತ್ತೇವೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಆದ್ರು ನಮಗೆ ಕಾಲ್ ಮಾಡಿ ಎಂದು ಎಲ್ಲಾ ಬಿಜೆಪಿ ಶಾಸಕರಿಗೆ ರಕ್ಷಣಾತ್ಮಕ ಸಂದೇಶ ರವಾನಿಸಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv