ಶಿವಮೊಗ್ಗ: ಯುದ್ದ ಪೀಡಿತ ಸುಡಾನ್ (Sudan) ದೇಶದಲ್ಲಿದ್ದ ಶಿವಮೊಗ್ಗ (Shivamogga) ಮೂಲದ ಜನ ಆಪರೇಷನ್ ಕಾವೇರಿ (Operation Kaveri) ಮೂಲಕ ಯಶಸ್ವಿಯಾಗಿ ತಾಯ್ನಾಡು ಸೇರಿದ್ದಾರೆ.
ಶಿವಮೊಗ್ಗದ ಸಾಗರ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ನಗರದ 5 ಜನ ಹಾಗೂ ಸದಾಶಿವಪುರದ(ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ) ಸುಮಾರು 40 ಜನರ ತಂಡ ಇಂದು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಅಂಬೇಡ್ಕರ್ ನಗರದ ನಿವಾಸಿಗಳಾದ ದೀಪಾ, ಗೋಪಾಲ್, ಲಾಕುಲಾ ಸೇರಿದಂತೆ ಒಟ್ಟು ಐದು ಜನ ಇಂದು ಬೆಳಗ್ಗೆ 5 ಗಂಟೆಗೆ ಬಸ್ ಮೂಲಕ ಮನೆಗೆ ಆಗಮಿಸಿದರು.
Advertisement
Advertisement
ತಮ್ಮ ಆರ್ಯವೇದ ಔಷಧವನ್ನು ಮಾರಾಟ ಮಾಡಲು ಶಿವಮೊಗ್ಗ ನಿವಾಸಿಗಳು ಕಳೆದ ವರ್ಷ ಸುಡಾನ್‌ಗೆ ಹೋಗಿದ್ದರು. ಭಾರತದಲ್ಲಿ ಸಿಗುವ ನಾರು – ಬೇರುಗಳಿಂದ ತಲೆಗೆ ಹಾಗೂ ಮಸಾಜ್ ಗೆ ಬಳಸುವ ಎಣ್ಣೆಯನ್ನು ತಯಾರು ಮಾಡಿಕೊಂಡು ಪ್ರತಿ ವರ್ಷ ಇವರು ಆಫ್ರಿಕಾ ದೇಶಗಳಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಆರಂಭದಲ್ಲಿ ಇವರು ದೊಡ್ಡ ನಗರದಲ್ಲಿ ಮನೆ ಮಾಡುತ್ತಾರೆ. ನಂತರ ಅಕ್ಕಪಕ್ಕದ ಪಟ್ಟಣ ಸೇರಿದಂತೆ ಗ್ರಾಮಗಳಿಗೆ ತೆರಳಿ ವ್ಯಾಪಾರ ನಡೆಸಿಕೊಂಡು ವಾಪಸ್ ಆಗುತ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ
Advertisement
Advertisement
ಯುದ್ದ ಪ್ರಾರಂಭವಾದಗಿನಿಂದ ನಾವು ಒಂದು ಕಡೆ ಸಿಲುಕಿಕೊಂಡಿದ್ದೆವು. ಅಲ್ಲಿಂದ ಬೇರೆ ಕಡೆ ಹೋಗಲು ಆಗದೇ ಅಲ್ಲೇ ಇರಲು ಆಗದೇ ಬಹಳ ನೋವು ಅನುಭವಿಸಿದೆವು. ನಮಗೆ ಊಟ, ತಿಂಡಿ ಕುಡಿಯುವ ನೀರು ಸಹ ಸಿಗಲಿಲ್ಲ. ನಾವು ಉಳಿದುಕೊಂಡ ಲಾಡ್ಜ್ ನಲ್ಲಿನ ಶೌಚಾಲಯದ ನೀರು ಕುಡಿದು ಜೀವ ಉಳಿಸಿಕೊಂಡಿದ್ದೆವು. ನಮ್ಮ ಕಷ್ಟ ಅರಿತ ಭಾರತ ಸರ್ಕಾರ ನಮ್ಮನ್ನು ಸುಡಾನ್ ನಿಂದ ಸೌದಿಗೆ ಕರೆದುಕೊಂಡು ಬಂದಿತ್ತು. ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಬಸ್ ಮೂಲಕ ನಮ್ಮನ್ನು ಮನೆಗೆ ತಲುಪಿದ್ದಾರೆ. ನಮ್ಮನ್ನು ಮರಳಿ ಮನೆ ತಲುಪಿಸಿದ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ನಾವು ಅಭಿನಂದನೆ ಹೇಳುತ್ತೇವೆ ಎಂದು ಅವರು ತಿಳಿಸಿದರು.