ಶ್ರೀರಾಮುಲು ಡಿಸಿಎಂ ಆಗೋದಾದ್ರೆ, ಆಪರೇಷನ್ ಕಮಲದ ಖರ್ಚೆಲ್ಲಾ ನಂದೆ ಅಂದ್ರಂತೆ ಗಾಲಿ ಜನಾರ್ದನ ರೆಡ್ಡಿ…!

Public TV
2 Min Read
REDDY SRIRAMULU

ಬಳ್ಳಾರಿ: ಪರಮಾಪ್ತ ಶಾಸಕ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ, ಬಿಜೆಪಿಯ ಆಪರೇಷನ್ ಕಮಲದ ಖರ್ಚನ್ನೆಲ್ಲಾ ಸಂಪೂರ್ಣ ವಹಿಸಿಕೊಳ್ಳುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎಂಬ ತಿಳಿದು ಬಂದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಲು ಮುಂದಾಗಿದೆ. ಆದರೆ ಈ ಆಪರೇಷನ್ ಕಮಲ ಮಾಡಿದಾಗ ಕೈ ಶಾಸಕರಿಗೆ ಕೊಡಬೇಕಾದ ಕೋಟಿ ಕೋಟಿ ಹಣದ ಮೊತ್ತವನ್ನು ತಾವೇ ಭರಿಸುವುದಾಗಿ ಗಣಿಧಣಿ ರೆಡಿಯಾಗಿದ್ದಾರೆ. ಅಲ್ಲದೇ ಆಪರೇಷನ್ ಕಮಲಕ್ಕೆ ಬೇಕಾಗುವ 300 ಕೋಟಿ ರೂಪಾಯಿ ಫಂಡ್ ಅನ್ನು ಕೊಡಲು ಅವರು ಸಿದ್ಧರಾಗಿದ್ದಾರೆ.

Janardhan Reddy

ಶ್ರೀರಾಮುಲು ಡಿಸಿಎಂ ಆಗ್ತಾರಾ?
ಹೌದು, ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ತಮ್ಮ ಪರಮಾಪ್ತ ಸ್ನೇಹಿತನಾದ ಶಾಸಕ ಶ್ರೀರಾಮುಲುರನ್ನು ಬಿಜೆಪಿ ಡಿಸಿಎಂ ಮಾಡಲು ಒಪ್ಪಿದರೆ, ಆಪರೇಷನ್ ಕಮಲದ ಖರ್ಚೆಲ್ಲಾ ತಮಗೆ ಇರಲಿ ಅನ್ನುವ ಸಂದೇಶವನ್ನು ಕಮಲ ಪಾಳಯಕ್ಕೆ ರವಾನೆ ಮಾಡಿದ್ದಾರಂತೆ. ಅಲ್ಲದೇ ಕೈ ಶಾಸಕರು ಏನೇ ಬೇಡಿಕೆ ಇಟ್ಟರೂ, ಈಡೇರಿಸಲು ತಾವೂ ಸಿದ್ಧ. ಆದರೆ ಬಿಜೆಪಿ ಮಾತ್ರ ಶಾಸಕ ಶ್ರೀರಾಮುಲುರನ್ನು ಮುಂದಿನ ಉಪಮುಖ್ಯಮಂತ್ರಿ ಮಾಡುವ ಭರವಸೆ ನೀಡಬೇಕು ಎನ್ನುವ ಸಂದೇಶ ರವಾನಿಸಿದ್ದಾರಂತೆ ಎಂದು ತಿಳಿದು ಬಂದಿದೆ.

ಹೀಗಾಗಿ ಶಾಸಕ ಶ್ರೀರಾಮುಲು ಸೇರಿದಂತೆ ಬಿಜೆಪಿಯ ಕೆಲ ನಾಯಕರು ಇದೀಗ ಕೈ ಶಾಸಕರನ್ನ ಖರೀದಿ ಮಾಡಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರಂತೆ. ಈ ಹಿಂದೆಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗೋ ವೇಳೆಯೂ ಶಾಸಕರಾದ ಶ್ರೀರಾಮುಲು ಹಾಗೂ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾಗಿ ವಿಫಲರಾಗಿದ್ದರು. ಆದರೆ ಈ ಭಾರಿ ಎಷ್ಟೇ ಖರ್ಚಾದ್ರೂ ಸರಿ ಶ್ರೀರಾಮುಲುರನ್ನು ಡಿಸಿಎಂ ಮಾಡಲು ತಾವೂ ಸಿದ್ಧ ಅನ್ನುವ ಸಂದೇಶ ರೆಡ್ಡಿ ಪಾಳಯದಿಂದ ಹೊರಬಿದ್ದಿದೆ ಎನ್ನಲಾಗಿದೆ.

sriramulu reddy 1

ಯಾವ ಶಾಸಕರು ಜಂಪ್ ಆಗ್ತಾರೆ?
ಸದ್ಯ ವಿದೇಶದಲ್ಲಿರುವ ಮಾಜಿ ಸಚಿವ ಸಂತೋಷ್ ಲಾಡ್ ರೊಂದಿಗೆ ಶ್ರೀರಾಮುಲು ಸತತ ಸಂಪರ್ಕದಲ್ಲಿ ಇದ್ದಾರಂತೆ. ಬಳ್ಳಾರಿಯ 5 ಶಾಸಕರನ್ನ ಸೆಳೆಯಲು ಮುಂದಾಗಿದ್ದಾರಂತೆ. ಸಂತೋಷ್ ಲಾಡ್ ರ ನೇತೃತ್ವದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಜೆಡಿಎಸ್ ತೊರೆದು ಕೈ ಪಾಳಯ ಸೇರಿದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್, ಕಂಪ್ಲಿಯ ಜಿ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಇವರೆಲ್ಲರೂ ಬಿಜೆಪಿಗೆ ತರುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

Jumping Star 1

ಸಚಿವ ರಮೇಶ್ ಜಾರಕಿಹೊಳಿಯೊಂದಿಗೆ ಕೆಲ ಶಾಸಕರು ಬಿಜೆಪಿ ಸೇರ್ಪಡೆಯಾಗೋದು ಖಚಿತವಾದರೆ, ಬಳ್ಳಾರಿ ಜಿಲ್ಲೆಯ 5 ಶಾಸಕರನ್ನ ಸಂತೋಷ ಲಾಡ್ ಮೂಲಕವೇ ಬಿಜೆಪಿಗೆ ಕರೆತರಲು ಶ್ರೀರಾಮುಲು ಸಜ್ಜಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹೊಸಪೇಟೆ ಶಾಸಕ ಆನಂದಸಿಂಗ್ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನಗೊಂಡಿದ್ದಾರಂತೆ. ಕಾಂಗ್ರೆಸ್ ಸೇರ್ಪಡೆ ವೇಳೆ ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ. ಡಿಕೆ ಶಿವಕುಮಾರ್ ತಮಗೆ ಸಚಿವ ಸ್ಥಾನ ಕೊಡಿಸದ್ದಕ್ಕೆ ಬೇಸರಗೊಂಡು ಆನಂದಸಿಂಗ್ ಚುನಾವಣಾ ನಿವೃತ್ತಿ ಘೋಷಿಸಿದರು ಎಂಬ ಸುದ್ದಿಗಳು ಬಳ್ಳಾರಿ ರಾಜಕಾರಣದಲ್ಲಿ ಹರಿದಾಡುತ್ತಿವೆ.

Jumping Star 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article