Connect with us

Bengaluru City

ಶಾಸಕರಿಗೆ ಹೆಚ್ಚಿನ ಧೈರ್ಯ, ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಿದ್ದೇವೆ: ವಾಮನಾಚಾರ್ಯ

Published

on

ಬೆಂಗಳೂರು: ಬಿಜೆಪಿ ಪಕ್ಷ ಯಾವುದೇ ಆಪರೇಷನ್ ಮಾಡುತ್ತಿಲ್ಲ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಹೆಚ್ಚಿನ ಧೈರ್ಯ ಹಾಗೂ ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ವಕ್ತಾರ ವಾಮನಾಚಾರ್ಯ ಅವರು ತಿಳಿಸಿದ್ದಾರೆ.

ಆಪರೇಷನ್ ಕಮಲ ಮಾಡುತ್ತಿದ್ದಾರೆ ಎನ್ನುವ ಆಡಳಿತ ಪಕ್ಷದ ನಾಯಕರ ಆರೋಪ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲದಿಂದಾಗಿ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ. ಪರಿಣಾಮ ಮೈತ್ರಿ ಸರ್ಕಾರದಲ್ಲಿ ಶಾಸಕರ ನಂಬರ್ ಕುಸಿಯುತ್ತದೆ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ನಮ್ಮ ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಅವರೇ ಈ ರೀತಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಈ ಮೂಲಕ ಇಲ್ಲದ ಗೊಂದಲವನ್ನು ಅವರೇ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಅವರೇ ಹೇಳಿದಂತೆ ನಮ್ಮ ಶಾಸಕರನ್ನ ಸೆಳೆಯುವ ಪ್ರಯತ್ನ ಅವರು ಮಾಡುತ್ತಿರುವುದರಿಂದ, ಶಾಸಕರಲ್ಲಿ ಆತ್ಮ ಬಲ ಹೆಚ್ಚಿಸಿ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಇದು ಒಳ್ಳೆಯ ಸಮಯವಾಗಿರುವ ಕಾರಣ ಅಲ್ಲಿದ್ದಾರೆ ಅಷ್ಟೇ. ಒಂದೊಮ್ಮೆ ಮೈತ್ರಿ ಸರ್ಕಾರದ ಶಾಸಕರ ಬಗ್ಗೆ ಅಷ್ಟೊಂದು ಭಯ ಇದ್ದರೆ, ಅವರನ್ನು ಹಿಡಿದಿಟ್ಟುಕೊಳ್ಳಿ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಶಾಸಕರು ಪಕ್ಷದ ಒಳಗಿನ ಆಂತರಿಕ ಕಲಹದಿಂದ ಮುಂಬೈಗೆ ಹೋಗಿದ್ದಾರೆ. ಆದರೆ ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರೇ ಮುಂಬೈಗೆ ತೆರಳಿದ ಮೇಲೆ ನಮ್ಮ ಶಾಸಕರನ್ನು ಬೇರೆ ವಿಚಾರಕ್ಕೆ ಸಂಪರ್ಕ ಮಾಡಿರಬಹುದು. ಅದು ಶಾಸಕರನ್ನ ಸೆಳೆಯುವ ಪ್ರಯತ್ನ ಅಲ್ಲ. ಬಿಜೆಪಿ ಕಾರಣದಿಂದ ಶಾಸಕರು ಮುಂಬೈಗೆ ಹೋಗಿಲ್ಲ. ಅಲ್ಲದೇ ನಾವು ಯಾವ ಶಾಸಕರನ್ನು ಸಂಪರ್ಕ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರು ಮುಂಬೈನಲ್ಲಿ ಶಾಸಕ ಉಮೇಶ್ ಜಾದವ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಮುಂಬೈಗೆ ಏಕೆ ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಶಾಸಕರೇ ನಮ್ಮ ಶಾಸಕರನ್ನ ಭೇಟಿ ಮಾಡಬೇಕು ಎಂದಾಗ ಹೋಗಿರಬಹುದು ಎಂದರು. ಅಲ್ಲದೇ ಮಹಾರಾಷ್ಟ್ರ ಸಚಿವರ ಹೇಳಿಕೆ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳುತ್ತಾರೆ. ಅದರ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಆದರೆ ನಮ್ಮ ಪಕ್ಷದ ಮೊದಲಿಗೆ ಸರ್ಕಾರ ರಚನೆ ಮಾಡಲು ಮುಂದಾಗಿತ್ತು. ಸಾಧ್ಯವಾಗದೇ ಇದ್ದಾಗ ಆ ಪ್ರಯತ್ನವನ್ನು ಕೈಬಿಟ್ಟು, ಮತ್ತೆ ಸರ್ಕಾರ ರಚಿಸಲು ಮುಂದಾಗಲಿಲ್ಲ. ಅಲ್ಲದೇ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿರುವುದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ನಾವು ಮೈತ್ರಿ ಸರ್ಕಾರ ಕೆಡವಲು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರದಲ್ಲಿ ಈಗ ಇರುವ ವಾತಾವರಣದ ಸ್ಥಿತಿ ರಸ್ತೆಯಲ್ಲಿ ಹೋಗುವವನಿಗೂ ತಿಳಿಯುತ್ತದೆ. ಅಂಗೈ ಹುಣ್ಣಿಗೆ ಕನ್ನಡಿ ಏಕೆ? ಸರ್ಕಾರ ತಾನಾಗಿಯೇ ಬಿದ್ದರೆ ಸಾಮಾನ್ಯವಾಗಿಯೇ ಅತಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಬಿಜೆಪಿ ಸರ್ಕಾರ ರಚಿಸುತ್ತದೆ. ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಅಂತರಿಕ ಕಿತ್ತಾಟದಿಂದ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಃ ಡಿಕೆ ಶಿವಕುಮಾರ್ ಅವರೇ ನಮ್ಮ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ ಸಾಧ್ಯವಾಗಲಿಲ್ಲ. ಇನ್ನು ಮುಂದಾದರೂ ಬಿಜೆಪಿ ಮೇಲೆ ಈ ರೀತಿಯ ಆರೋಪ ಮಾಡಬಾರದು ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *

www.publictv.in