– ಸಿದ್ದರಾಮಯ್ಯ ನಾಲ್ಕು ಶಾಸಕರನ್ನು ಬಿಜೆಪಿಗೆ ಕಳಿಸಿದ್ದಾರೆ
– ಮಾಜಿ ಸಿಎಂ ವಿರುದ್ಧ ಬಿಎಸ್‍ವೈ ಆರೋಪ
– ಮೈತ್ರಿ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲಿ
ಬೆಂಗಳೂರು: ಆಪರೇಷನ್ ಕಮಲಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಬೇಡಿ. ಯಾವುದೇ ರೀತಿಯ ಪ್ರಯತ್ನ ಪಡದೇ ಸದ್ಯಕ್ಕೆ ಸುಮ್ಮನಿರಿ ಎಂದು ದೆಹಲಿ ನಾಯಕರು ನಮಗೆ ಸೂಚನೆ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಸೂಚನೆಯಂತೆ ನಾವು ವಿಪಕ್ಷದಲ್ಲಿ ಇದ್ದು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಲಿ. ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೇರಿದಂತೆ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯನವರೇ ನಮ್ಮ ಜೊತೆಗೆ ನಾಲ್ಕು ಶಾಸಕರನ್ನು ಕಳಿಸಿದ್ದಾರೆ. ಅವರ ಈ ಆಟ ನಮಗೆ ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದರು.
Advertisement
ಮೈತ್ರಿ ಒಗ್ಗಟ್ಟಾಗಿ ಕೆಲಸ ಮಾಡಲಿ. ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ರೈತರ ಸಾಲಮನ್ನಾ ಮಾಡಿಲ್ಲ, ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ. ಎಲ್ಲಿಯವರೆಗೂ ರಾಜ್ಯದ ಜನರಿಗಾಗಿ ಸರ್ಕಾರ ಶ್ರಮಿಸುತ್ತದೆಯೋ ಅಲ್ಲಿಯವರೆಗೂ ನಾವು ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದರು.
Advertisement
ಕೇಂದ್ರ ಸಂಪುಟದಲ್ಲಿ ರಾಜ್ಯದ ಮೂವರು ಸಂಸದರಿಗೆ ಒಳ್ಳೆಯ ಇಲಾಖೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಈ ತೀರ್ಮಾನ ನಮಗೆ ಸಂತೋಷ ತಂದಿದೆ. ಈ ಮೂಲಕ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಇನ್ನೂ ಎರಡು ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಿಂದಾಲ್‍ಗೆ ಕಡಿಮೆ ದರದಲ್ಲಿ ಸಾವಿರಾರು ಎಕರೆ ಜಾಗವನ್ನು ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಿಂದಾಲ್‍ಗೆ ಇನ್ನೂ ಹತ್ತು ವರ್ಷ ಕಾಲ ಗುತ್ತಿಗೆ ಕೊಡಲಿ. ಆದರೆ ಸರ್ಕಾರಿ ಭೂಮಿಯನ್ನು ಕಡಿಮೆ ಬೆಲೆಗೆ ಕೊಡುವುದು ಎಷ್ಟು ಸರಿ? ನಾವು ಇದನ್ನು ಗಂಭೀರವಾಗಿ ಪರಿಣಿಸಿದ್ದೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನಲ್ಲಿ ಜೂನ್ 5ರಂದು ನೂತನ ಸಂಸದರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇವೆ. ಅಂದು ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖರೊಂದಿಗೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡುತ್ತೇವೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಮತ್ತು ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದರು.
ಮೈತ್ರಿ ಪಕ್ಷಗಳಿಂದ ಆಡಳಿತ ಯಂತ್ರ ದುರುಪಯೋಗವಾಗಿದೆ. ಮತದಾರರಿಗೆ ಹಣದ ನೀಡಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ ಎಂದು ದೂರಿದರು.