ಬೀದರ್: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತಿ ಸರ್ಕಾರ ಅಧಿಕಾರಲ್ಲಿ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಹುಮ್ನಾಬಾದ್ ಪಟ್ಟಣದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುಂದಿನ ಎರಡು ತಿಂಗಳಲ್ಲಿ ಮುಕ್ತಾಯವಾಗುತ್ತದೆ. ಬೀದರ್, ಕಲಬುರಗಿ ಸೇರಿದಂತೆ ರಾಜ್ಯದ 22 ಕ್ಷೇತ್ರಗಳಿಂದ ಬಿಜೆಪಿ ಜಯಗಳಿಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಂದುಕೊಂಡಂತೆ ಲೋಕಸಭಾ ಚುನಾವಣೆ ಫಲಿತಾಂಶ ಬಂದರೆ ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇರುವುದಿಲ್ಲ. ಇದರ ಬಗ್ಗೆ ಯಾವುದೇ ಸಂದೇಹವೇ ಬೇಡ ಎಂದು ಎಂದು ಹೇಳಿದ್ದಾರೆ.
Advertisement
Advertisement
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 25 ಸ್ಥಾನ ಗೆಲ್ಲಿಸಿಕೊಡಿ. ನಂತರ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅನಿತ್ ಶಾ ಅವರು ಗುರುವಾರ ಬೆಂಗಳೂರಿನಲ್ಲಿ ಪಕ್ಷದ ಸಂಸದರು, ಶಾಸಕರು, ಲೋಕಸಭಾ ಪ್ರಬಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ತಿಳಿಸಿದ್ದರು.
Advertisement
ಅಮಿತ್ ಶಾ ಅವರು ನೀಡಿರುವ ಟಾರ್ಗೆಟ್ ಬೆನ್ನು ಹತ್ತಿರುವ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾರೆ. ಹೇಗಾದರೂ ಮಾಡಿ ರಾಜ್ಯದಲ್ಲಿ 22ರಿಂದ 25 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎನ್ನುವ ಪಣತೊಟ್ಟಿದ್ದಾರೆ. ಸದ್ಯಕ್ಕೆ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿದ್ದು, 20ಕ್ಕಿಂತಲೂ ಹೆಚ್ಚಿನ ಸ್ಥಾನ ಗೆದ್ದರೆ ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಜನಾಭಿಪ್ರಾಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ನಂತರ ಆಪರೇಷನ್ ಕಮಲ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಲೆಕ್ಕಾಚಾರವನ್ನು ಬಿಎಸ್‍ವೈ ಹಾಕಿದ್ದಾರೆ ಎನ್ನಲಾಗಿದೆ.
Advertisement
ಆಪರೇಷನ್ ಕಮಲ ಆಡಿಯೋ ಪ್ರಕರಣದಿಂದ ಸ್ವಲ್ಪ ರಿಲೀಫ್ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಮಧ್ಯಾಹ್ನದ ಹುಮ್ನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಮಾತನಾಡಿ, ಮೈತ್ರಿ ನಾಯಕರು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದರು. ಆದರೆ ಕೋರ್ಟ್ ನನಗೆ ನ್ಯಾಯ ಒದಗಿಸಿಕೊಟ್ಟಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯ, ದೇವರ ಬಗ್ಗೆ ನನಗೆ ಅಪಾರ ವಿಶ್ವಾಸವಿದೆ. ಹೀಗಾಗಿ ನನಗೆ ಅನ್ಯಾಯವಾಗಲಿಲ್ಲ ಎಂದು ಕಿಡಿಕಾರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv