– ಸರ್ಕಾರದ ವಿರುದ್ಧದ ಕಮಿಷನ್ ಆರೋಪಕ್ಕೆ ಹೋರಾಟ ತಂತ್ರ
– ಲೋಕಸಭೆ ಚುನಾವಣೆಗೆ ರಿವರ್ಸ್ ಆಪರೇಷನ್ ಚರ್ಚೆ
– ಎನ್‌ಇಪಿ ರದ್ದು ಮಾಡುವ ಸರ್ಕಾರದ ಕ್ರಮ ಖಂಡಿಸಿ ಹೋರಾಟಕ್ಕೆ ಪ್ಲ್ಯಾನ್
ಬೆಂಗಳೂರು: ಲೋಕಸಭೆ ಚುನಾವಣೆ ತಯಾರಿ, ಆಪರೇಷನ್ ಹಸ್ತ, ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಬಿಜೆಪಿ (BJP) ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರು ಸಭೆ ನಡೆಸಿ ಚರ್ಚಿಸಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಹಸ್ತದ (Operation Hasta) ಬಗ್ಗೆ ಗಂಭೀರ ಚರ್ಚೆ ನಡೆಯಿತು. ಆಪರೇಷನ್ ಹಸ್ತಕ್ಕೆ ಬ್ರೇಕ್ ಹಾಕುವ ಬಗ್ಗೆ ನಾಯಕರು ಚರ್ಚಿಸಿದರು. ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ: ಪರಮೇಶ್ವರ್
ಐದು ವರ್ಷ ಸರ್ಕಾರ ಇವರದ್ದೇ ಇರುತ್ತೆ. 135 ಸ್ಥಾನ ಗೆದ್ದಿದ್ರೂ ನಮ್ಮ ಶಾಸಕರ ಮೇಲೆ ಕಣ್ಣು ಹಾಕಿದ್ದಾರೆ ಎಂದು ಕೆಲ ನಾಯಕರು ಆಕ್ರೋಶ ಹೊರಹಾಕಿದರು. ವಲಸಿಗರಲ್ಲಿ ಯರ‍್ಯಾರು ಹೋಗಬಹುದು? ಅವರನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ, ವಲಸಿಗರ ಜೊತೆ ಸಮಾಲೋಚನೆ ಮಾಡುವುದಾಗಿ ಸಭೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನೀವೇ ಅವರ ಜೊತೆ ಮಾತನಾಡುವುದು ಸೂಕ್ತ ಎಂದು ಉಳಿದ ನಾಯಕರು ಯಡಿಯೂರಪ್ಪರಿಗೆ (B.S.Yediyurappa) ತಾಕೀತು ಮಾಡಿದರು.
ರಾಜ್ಯ ಸರ್ಕಾರದ ಮೇಲೆ ಬಂದಿರುವ ಕಮಿಷನ್ ಆರೋಪ ವಿಚಾರದಲ್ಲಿ ಹೋರಾಟಕ್ಕೆ ತಂತ್ರ, ಗುತ್ತಿಗೆದಾರರು ಮಾಡಿರುವ ಆರೋಪಕ್ಕೆ ರಾಜ್ಯಾದ್ಯಂತ ಹೋರಾಟಕ್ಕೆ ರೂಪುರೇಷೆ, ಎನ್‌ಇಪಿ ರದ್ದು ಮಾಡುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹೋರಾಟಕ್ಕೆ ಪ್ಲಾನ್, ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುವ ರಾಜ್ಯ ಸರ್ಕಾರದ ನಡೆಗೆ ವಿವಿಧ ಸ್ವರೂಪದ ಹೋರಾಟಕ್ಕೆ ರೂಪುರೇಷೆ, ಕಾಂಗ್ರೆಸ್‌ಗೆ ಮರಳುತ್ತಾರೆ ಎನ್ನಲಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್ ಮತ್ತಿತರರ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ಬಿಬಿಎಂಪಿ ಚುನಾವಣೆ, ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕ ಎಂದು ಕಾನೂನು ಹೋರಾಟದ ಚರ್ಚೆ, ಲೋಕಸಭೆ ಚುನಾವಣಾ ತಯಾರಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ, ಲೋಕಸಭೆ ಚುನಾವಣೆಗೆ ರಿವರ್ಸ್ ಆಪರೇಷನ್ ಮೊದಲಾದ ವಿಷಯಗಳ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಟ್ಟ ವಿಚಾರಕ್ಕೆ ಬಿಜೆಪಿ ಕೆಂಡ – ಮಂಡ್ಯದ ಹೆದ್ದಾರಿಯಲ್ಲಿ ಹುರುಳಿ ಬಿತ್ತಿ ಪ್ರತಿಭಟನೆ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ಸೇರಿ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
Web Stories