ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಆಡಳಿತ ಪಕ್ಷದ ಸದಸ್ಯರಿಗೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದ ಪ್ರಸಂಗ ವಿಧಾನ ಪರಿಷತ್ ಕಲಾದಪಲ್ಲಿ ನಡೆಯಿತು.
ಆಪರೇಷನ್ ಆಡಿಯೋ ಪ್ರಕರಣ ವಿಧಾನ ಪರಿಷತ್ ಕಲಾಪದಲ್ಲಿಯೂ ಭಾರೀ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಯಿತು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಇದನ್ನು ಖಂಡಿಸಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಆಡಳಿತ ಪಕ್ಷಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.
Advertisement
Advertisement
ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಆಪರೇಷನ್ ಆಡಿಯೋ ವಿಚಾರ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ತಿಳಿ ಹೇಳಿದರು. ಆದರೂ ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಮಧ್ಯೆ ವಾಗ್ದಾಳಿ ನಡೆದೇ ಇತ್ತು. ಹೀಗಾಗಿ 5 ನಿಮಿಷಗಳಂತೆ ಎರಡು ಬಾರಿ ಅಧಿವೇಶನ ಮುಂದಕ್ಕೂಡಿದರೂ ಸದಸ್ಯರು ಪರಸ್ಪರ ವಾಗ್ದಾಳಿ ಮುಂದುವರಿಸಿದ್ದರು.
Advertisement
ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ಆಪರೇಷನ್ ಆಡಿಯೋ ಬಗ್ಗೆ ನೀವು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಜೋರು ಧ್ವನಿಯಲ್ಲಿ ಗದರಿದರು.
Advertisement
ಸಭಾಪತಿ ಗದರಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಆದರೆ ಸಭಾಪತಿಗಳು ಮನವಿಯನ್ನು ತಳ್ಳಿ ಹಾಕಿದರು. ಇದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಧರಣಿ ಆರಂಭಿಸಿದರು. ಈ ವೇಳೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದರು.
ಆಡಳಿತ ಪಕ್ಷದ ಧರಣಿ ಹಾಗೂ ಬಿಜೆಪಿಯ ವಾಗ್ದಾಳಿಯಿಂದಾಗಿ ಸಭಾಪತಿಗಳು ಒಂದು ಗಂಟೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾಗಿದ್ದರೂ ಆಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಇದರಿಂದಾಗಿ ಬಿಜೆಪಿಯ ಸದಸ್ಯರು ಸಭಾತ್ಯಾಗ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv