ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದು ನೆರೆಯ ಮಹಾರಾಷ್ಟ್ರ ಸೇರಿಕೊಂಡಿರುವ 17 ಶಾಸಕರಿಗೆ ವಿಧಾನಸಭೆ ಬಾಗಿಲು ಬಂದ್ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನಲಾಗಿದ್ದು, ದೋಸ್ತಿ ಪಕ್ಷಗಳ ಆರು ಜನರು ಬಾಜಪದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಓರ್ವ ಶಾಸಕ ಸೇರಿದಂತೆ ಒಟ್ಟು ಆರು ಜನರು ಕಮಲ ಅಂಗಳಕ್ಕೆ ಪಾದಾರ್ಪಣೆ ಮಾಡಲು ನಿಂತಿದ್ದು, ಇಷ್ಟು ದಿನ ಅನರ್ಹತೆ ಭೀತಿಯಿಂದಾಗಿ ದೂರ ಉಳಿದುಕೊಂಡಿದ್ದರು ಎನ್ನಲಾಗಿದೆ. ಸೋಮವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ ಬಳಿಕ ರಮೇಶ್ ಕುಮಾರ್ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ರಮೇಶ್ ಕುಮಾರ್ ರಾಜೀನಾಮೆ ನೀಡಿದ್ರೆ ಬಿಜೆಪಿಯ ನಾಯಕರೊಬ್ಬರು ಸ್ಪೀಕರ್ ಆಗಲಿದ್ದಾರೆ. ಇದನ್ನೂ ಓದಿ: ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ
Advertisement
Advertisement
ಬಿಜೆಪಿ ಬೆಂಬಲಿತ ಸ್ಪೀಕರ್ ಆಯ್ಕೆಯಾದ್ರೆ ರಾಜೀನಾಮೆ ಸಹ ಬೇಗ ಅಂಗೀಕಾರವಾಗಲಿದೆ ಎಂದು ಆರು ಶಾಸಕರು ಇಷ್ಟು ದಿನ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಾಗಿ ಇಷ್ಟು ದಿನ ರಾಜೀನಾಮೆಯಿಂದ ದೂರ ಉಳಿದುಕೊಂಡಿದ್ದರು. ಒಂದು ವೇಳೆ ಅತೃಪ್ತರೊಂದಿಗೆ ರಾಜೀನಾಮೆ ಸಲ್ಲಿಸಿದ್ದರೆ ಇಂದು ಅನರ್ಹವಾಗಬೇಕಿತ್ತು ಎಂಬ ಲೆಕ್ಕಾಚಾರಗಳಿಂದಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿವೆ. ಇದನ್ನೂ ಓದಿ: ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು: ಸಿದ್ದರಾಮಯ್ಯ
Advertisement
ಬಹುಮತ ಸಾಬೀತುಪಡಿಸುವ ನೂತನ ಬಿಜೆಪಿ ಸರ್ಕಾರ ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸಬಹುದು. ಸಭಾಧ್ಯಕ್ಷರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನೋಟಿಸ್ ನೀಡಲಾಗುತ್ತದೆ. 15 ದಿನಗಳ ಬಳಿಕ ದಿನಾಂಕ ನಿಗದಿ ಮಾಡಿ ಅವಿಶ್ವಾಸವನ್ನು ಅದನ್ನು ಮತಕ್ಕೆ ಹಾಕಲಾಗುತ್ತದೆ. ಬಹುಮತ ಸಿಗದೇ ಇದ್ದಲ್ಲಿ ಸ್ಪೀಕರ್ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿಯಬೇಕಾಗುತ್ತದೆ.
Advertisement
ಯಾಕೆ ಈ ಆಪರೇಷನ್?
ಅನರ್ಹಗೊಂಡ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಮತ್ತೆ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ. ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಸೋತರೆ ಮತ್ತೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಬಹುದು. ಈ ರೀತಿ ಆಗದಂತೆ ತಡೆಯಲು ಬಿಜೆಪಿ ಈಗ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅತೃಪ್ತ ಶಾಸಕರ ಜೊತೆ ಸ್ನೇಹಿತರಾಗಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.