ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ 7 ತಿಂಗಳು ಕಳೆಯಲಿದೆ. ಆದರೂ ಮೈತ್ರಿ ಪಕ್ಷಗಳಲ್ಲಿ ನಾಯಕರ ಭಿನ್ನಮತ ಸ್ಫೋಟವಾಗುತ್ತಲೇ ಇದೆ. ಈ ನಡುವೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಆಪರೇಷನ್ ಕಮಲಕ್ಕೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಇಂದು ಬೆಳಗಾವಿ ಚಳಿಗಾಲ ಅಧಿವೇಶನ ಆರಂಭವಾಗಿದೆ. ಅಧಿವೇಶನ ಮೊದಲ ದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಗೈರಾಗಿದ್ದಾರೆ. ತಮ್ಮ ಅನುಪಸ್ಥಿತಿಗೆ ಕೆಲ ಕಾರಣಗಳನ್ನು ನೀಡಿದ್ದರೂ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವು ಸರಿ ಇಲ್ಲ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.
ಶಾಸಕ ಸತೀಶ್ ಜಾರಕಿಹೊಳಿ ಮತ್ತು ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ತಾರ ಎಂಬ ಬಿಸಿ ಬಿಸಿ ಚರ್ಚೆಗಳ ಆರಂಭವಾಗಿವೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಎಲ್ಲ ನಾಯಕರು ಬೆಳಗಾವಿಗೆ ಬಂದಿದ್ದಾರೆ. ಇದೇ ಡಿಸೆಂಬರ್ 12ಕ್ಕೆ ಅಂದ್ರೆ ಬುಧವಾರ ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಧಿವೇಶನದ ಗಲಾಟೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗ್ತಾರೆ ಎನ್ನಲಾಗುತ್ತಿದೆ.
Advertisement
Advertisement
ಕುಂದಾ ನಗರಿಗೆ ಆಗಮಿಸುವ ಮುನ್ನ ಜನಾರ್ದನ ರೆಡ್ಡಿ ಮುಂಬೈ ಸಮೀಪದ ಸಹರಾ ಸಿಟಿಯಲ್ಲಿರುವ ಆ್ಯಂಬಿವ್ಯಾಲಿ ರೆಸಾರ್ಟ್ ಬುಕ್ ಮಾಡಿದ್ದಾರಂತೆ. ಮಂಗಳವಾರ ರಾಜಸ್ಥಾನ, ಮಧ್ಯ ಪ್ರದೇಶ, ಮೀಜೋರಾಂ, ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಕಾಂಗ್ರೆಸ್ 9 ಅತೃಪ್ತ ಶಾಸಕರು ಪಕ್ಷ ತೊರೆದು ಹೊರ ಬರುತ್ತಾರಾ ಎನ್ನುವುದು ಜನಾರ್ದನ ರೆಡ್ಡಿ ಅವರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎನ್ನುವ ಸುದ್ದಿ ಇಗ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
Advertisement
ಒಂದು ಅಧಿವೇಶನದಲ್ಲಿ ಅಸಮಾಧಾನ ಹೊಗೆಯ ಕಾಣಿಸಿಕೊಂಡರೆ ಅದರ ನೇರ ಲಾಭ ಪಡೆದುಕೊಳ್ಳಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಂತೆ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಬಿಜೆಪಿ ಬಳಿಯ ಪಟ್ಟಿಯಲ್ಲಿರುವ 9 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿ ಪಕ್ಷಕ್ಕೆ ಕರೆತರಲಿ ರೆಡ್ಡಿಗಾರು ಮಹಾ ಸ್ಕೆಚ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಲ್ಲಿ ಟಾರ್ಗೇಟ್ ಆಗಿದ್ದಾರೆ. ಸಿದ್ದರಾಮಯ್ಯನವರು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ಆ ಮೂವರು ಎಲ್ಲಿ ಹೋಗ್ತಾರೆ? ಎಲ್ಲಿ ಬರ್ತಾರೆ? ಯಾರ ಜೊತೆ ಮಾತಾಡ್ತಾರೆ? ಎಲ್ಲಿ ಸೇರ್ತಾರೆ? ಕಣ್ಣಿಡಿ ಎಂದು ಸಿಎಂ, ಡಿಸಿಎಂಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಸಿಎಂ ಸೂಚನೆಯಂತೆ ಗುಪ್ತಚರ ಇಲಾಖೆಯಿಂದ ಆಪರೇಷನ್ ‘310’ ಶುರುವಾಗಿದೆ. ನಿಗಾ ಇಡಲೆಂದೇ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಂಕಮ್ ಹೋಟೆಲ್‍ನಲ್ಲಿ 310ನೇ ಕೊಠಡಿ ನೀಡಲಾಗಿದ್ದು, ಈ ಹೋಟೆಲ್ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ರೂಂ ಬಳಿ ಸುಳಿದಾಡುತ್ತಿರುವ, ತಪಾಸಣೆ ಮಾಡುತ್ತಿರುವ ಎಕ್ಸ್ ಕ್ಲೂಸಿವ್ ದೃಶ್ಯ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.
ಆಪರೇಷನ್ `310′ ಸುಳಿವು ಸಿಗುತ್ತಲೇ ಬೆಳಗಾವಿ ಸಾಹುಕಾರ ಫುಲ್ ಅಲರ್ಟ್ ಆಗಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕಾರ್, ಎಸ್ಕಾರ್ಟ್, ಪೈಲೆಟ್ ಎಲ್ಲಾ ಬಿಟ್ಟು ಓಡಾಡುತ್ತಿದ್ದಾರೆ. ನಡೆದಿದ್ದೇ ಹಾದಿ ಎನ್ನುವ ಬ್ರದರ್ಸ್ ಗೆ ಈಗ ತಮ್ಮ ನೆಲದಲ್ಲೆ `ಕದ್ದುಮುಚ್ಚಿ’ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಆಪರೇಷನ್ ಕಮಲದ ಭೀತಿ, ರೆಸಾರ್ಟ್ ರಾಜಕಾರಣದ ಆತಂಕದಿಂದ ಆಪರೇಷನ್ ‘310’ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಸಿದ್ದು-ಸ್ವಾಮಿ-ಪರಮ ರಹಸ್ಯದ ಸ್ಕೆಚ್‍ಗೆ ಜಾರಕಿಹೊಳಿ ಬ್ರದರ್ಸ್ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಗುಸು ಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv