ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ಅರಣ್ಯಗಳು ದಕ್ಷಿಣ ಭಾರತದಲ್ಲಿ ‘V’ ಆಕಾರದಲ್ಲಿ ಹರಡಿರುವುದು ನಿಮಗೆ ಗೊತ್ತೇ ಇದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ,ಕೇರಳ, ಗೋವಾದಲ್ಲಿ ಪಶ್ಚಿಮ ಘಟ್ಟ ಇದ್ದರೆ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೂರ್ವ ಘಟ್ಟವಿದೆ. ಈ ಎರಡು ಪ್ರದೇಶಗಳು ಸಂದಿಸುವ ಜಾಗ ಯಾವುದು ಎಂದರೆ ಅದು ದೊಡ್ಡ ಬೆಟ್ಟ.
ಊಟಿ ರೈಲ್ವೇ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿರುವ ದೊಡ್ಡ ಬೆಟ್ಟ ಸಮುದ್ರ ಮಟ್ಟದಿಂದ 8,640 ಅಡಿ ಎತ್ತರದಲ್ಲಿದ್ದು, ದಕ್ಷಿಣ ಭಾರತದ ಎರಡನೇ ಅತಿ ಎತ್ತರವಾದ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರದೇಶದಲ್ಲಿ ನಿಂತು ನೋಡಿದರೆ ಬಂಡೀಪುರ ನ್ಯಾಷನಲ್ ಪಾರ್ಕ್ ಸೇರಿದಂತೆ ಕರ್ನಾಟಕವನ್ನು ನೋಡಬಹುದು. ಇದನ್ನೂ: ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್!
Advertisement
Advertisement
ಇಲ್ಲಿ ಒಂದು ಟೆಲಿಸ್ಕೋಪ್ ಹೌಸ್ ಇದ್ದು ದೂರದ ಪ್ರದೇಶಗಳನ್ನು ವೀಕ್ಷಿಸಬಹುದು. ಟೆಲಿಸ್ಕೋಪ್ ದರ್ಶನ ಎಷ್ಟು ನಿಖರವಾಗಿರುತ್ತದೆ ಅಂದರೆ 9 ಕಿ.ಮೀ ದೂರದಲ್ಲಿರುವ ಊಟಿ ರೈಲು ನಿಲ್ದಾಣದ ಬಳಿ ವ್ಯಕ್ತಿಗಳು ನಡೆದುಕೊಂಡು ಹೋಗುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಭಾನುವಾರ ಅಥವಾ ರಜಾ ದಿನ ದೊಡ್ಡ ಬೆಟ್ಟಕ್ಕೆ ಬಹಳ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕೆಳಗಡೆಯ ಸಾಲಿನಿಂದ ಮೇಲುಗಡೆ ಟೆಲಿಸ್ಕೋಪ್ ಇರುವ ಜಾಗಕ್ಕೆ ಹೋಗಬೇಕಾದರೆ ಕನಿಷ್ಟ 30-45 ನಿಮಿಷ ಬೇಕಾಗಬಹುದು.
Advertisement
Advertisement
1983ರ ಜೂನ್ 18 ರಂದು ಟೆಲಿಸ್ಕೋಪ್ ಹೌಸ್ ಆರಂಭಗೊಂಡಿದ್ದು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಟಿಟಿಡಿಸಿ) ನಡೆಸುತ್ತಿದೆ. ಬಸ್ ಸೇರಿದಂತೆ ಎಲ್ಲ ವಾಹನಗಳು ಬೆಟ್ಟದ ತುದಿಯವರೆಗೂ ಹೋಗುತ್ತದೆ. ರಸ್ತೆ ಮಾರ್ಗ ಉತ್ತಮವಾಗಿದೆ ಆದರೆ ಬಹಳಷ್ಟು ತಿರುವುಗಳಿವೆ. ಪಾರ್ಕಿಂಗ್ ಜಾಗದಿಂದ ಟೆಲಿಸ್ಕೋಪ್ ಹೌಸ್ 500 ಮೀಟರ್ ದೂರದಲ್ಲಿದೆ.
ಸುತ್ತಲೂ ಅರಣ್ಯ ಇರುವ ಕಾರಣ ಫೋಟೋಗ್ರಫಿ ಮಾಡುವವರಿಗೆ ಇಂದು ಸುಂದರ ಜಾಗ. ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಎಸ್ಟೇಟ್‌ಗಳು ಸಿಗುತ್ತವೆ. ಶುಲ್ಕ ಪಾವತಿಸಿ ಎಸ್ಟೇಟ್ ಒಳಗಡೆ ಹೋಗಿ ಫೋಟೋ ಕ್ಲಿಕ್ಕಿಸಬಹುದು.
– ಅಶ್ವಥ್ ಸಂಪಾಜೆ