ದಾವಣಗೆರೆ: ಬಹುತೇಕ ಪುರುಷರೇ ಹೆಚ್ಚು ರಥ ಎಳೆಯುತ್ತಾರೆ. ಆದ್ರೆ, ಜಿಲ್ಲೆಯ ಯರಗುಂಟೆ ಗ್ರಾಮದಲ್ಲಿ ಮಾತ್ರ ಮಹಿಳೆಯರಿಂದಲೇ ರಥೋತ್ಸವ ನಡೆಯುತ್ತದೆ.
ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಸ್ವಾಮಿ ಮಠದಲ್ಲಿ ಒಂದು ವಿಶಿಷ್ಠ ಸಂಪ್ರದಾಯವಿದೆ. ಗ್ರಾಮದಲ್ಲಿ ನಡೆಯುವ ರಥೋತ್ಸವದಲ್ಲಿ ರಥವನ್ನು ಪುರುಷರ ಬದಲಾಗಿ ಮಹಿಳೆಯರು ಎಳೆಯೋದು ಇಲ್ಲಿನ ಪದ್ದತಿ. ಕಳೆದ 6 ವರ್ಷಗಳಿಂದ ರಥೋತ್ಸವವನ್ನು ಮಹಿಳೆಯರೇ ಎಳೆದುಕೊಂಡು ಬಂದಿದ್ದಾರೆ. ಪ್ರತಿ ವರ್ಷವು ಈ ಅವಿಸ್ಮರಣೀಯ ಕ್ಷಣಗಳಿಗೆ ಸಾವಿರಾರು ಜನ ಸಾಕ್ಷಿಯಾಗಿ ಅಪರೂಪ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾರೆ.
ಕರಿಬಸವೇಶ್ವರ ಸ್ವಾಮಿ ಮಠದ ರಥೋತ್ಸವದ ದಿನದಂದು ರಥವನ್ನು ಹೂವಿನಿಂದ ಅಲಂಕಾರ ಮಾಡುವುದು ಇಲ್ಲಿನ ಸಂಪ್ರದಾಯ. ಹೀಗೆ ಶೃಂಗಾರಗೊಂಡ ರಥವನ್ನ ಮಹಿಳೆಯರು ಎಳೆಯುತ್ತಾರೆ. ಹಾಗೆಯೇ ಮಹಿಳೆಯರಿಗೆ ರಥೋತ್ಸವದಲ್ಲಿ ಗ್ರಾಮಸ್ಥರು ಪೋತ್ಸಾಹಿಸುತ್ತಾರೆ. ಒಂದೆಡೆ ರಥೋತ್ಸವ ನಡೆಯುತ್ತಿದ್ದರೆ, ಮತ್ತೊಂದೆಡೆ ಡೊಳ್ಳು ಕುಣಿತ, ಡ್ರಮ್ ಸೆಟ್ ಕಲರವದ ಸದ್ದಿನಿಂದ ಈ ಆಚರಣೆಗೆ ಮತ್ತಷ್ಟು ಮೆರಗು ತಂದುಕೊಡುತ್ತದೆ.
ಕರಿಬಸವೇಶ್ವರ ಸ್ವಾಮಿಯ ಮಠದಲ್ಲಿ ಕಳೆದ 8 ವರ್ಷಗಳಿಂದ ರಥೋತ್ಸವ ನಡೆಯುತ್ತಿದೆ. ಮೊದಲು ಪುರುಷರೇ ಇಲ್ಲಿ ರಥ ಎಳೆಯುತ್ತಿದ್ದರು. ಆದರೆ ಇಲ್ಲಿನ ಶ್ರೀಗಳು ಒಮ್ಮೆ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದಾಗ ಅಲ್ಲಿ ಮಹಿಳೆಯರು ರಥ ಎಳೆಯುವುದನ್ನ ನೋಡಿದ್ದರು. ನಂತರ ನಾವು ಕೂಡ ಮಹಿಳೆಯರಿಂದಲೇ ರಥ ಎಳೆಸಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಕಳೆದ 6 ವರ್ಷಗಳಿಂದ ಇಲ್ಲಿ ಮಹಿಳೆಯರೇ ರಥ ಎಳೆಯುತ್ತಿದ್ದಾರೆ. ಈ ರೀತಿ ಸಂಪ್ರದಾಯದಿಂದ ಮಹಿಳೆಯರಿಗೆ ಸಮಾನತೆ ಸಿಗುತ್ತದೆ, ಇಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರೆ ನಮಗೆ ಒಳ್ಳೆಯದಾಗುತ್ತದೆ ಎಂದು ಭಕ್ತಾದಿಗಳು ಹೇಳುತ್ತಾರೆ.
ಈ ಆಚರಣೆಯನ್ನು ಕಾರ್ಯರೂಪಕ್ಕೆ ತಂದ ಗ್ರಾಮದ ಕರಿಬಸವೇಶ್ವರ ಸ್ವಾಮೀಜಿ ಅವರು ಮಾತನಾಡಿ, ನಮ್ಮದು ಪುರುಷ ಪ್ರಧಾನ ದೇಶ. ಇಲ್ಲಿ ಮಹಿಳೆಯರಿಗೂ ಸಮಾನತೆ ಕಲ್ಪಿಸುವ ಹಿನ್ನೆಲೆಯಲ್ಲಿ ಈ ರೀತಿಯ ಆಚರಣೆ ಮಾಡುತ್ತಿದ್ದೇವೆ. ಮನೆಯಲ್ಲಿ ಪೂಜೆ ಮಾಡುವುದು ಹೆಣ್ಣು. ಈ ಭೂಮಿ ಕೂಡ ಒಂದು ಹೆಣ್ಣು. ಇನ್ನು ನಮ್ಮನ್ನ ಸೃಷ್ಟಿಸುವುದು ಕೂಡ ಹೆಣ್ಣು. ಹೆಣ್ಣಿಗೆ ಸಮಾನತೆ ಸಿಗಬೇಕೆಂದು ಮಹಿಳೆಯರಿಂದಲೇ ರಥೋತ್ಸವ ಎಳೆಯುವ ಸಂಪ್ರದಾಯ ಇಲ್ಲಿ ನಡೆಯುತ್ತಾ ಬಂದಿದೆ ಎಂದು ತಿಳಿಸಿದರು.
ರಥೋತ್ಸವದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮಹಿಳೆಯರು ರಥ ಎಳೆಯುವುದನ್ನ ಸಾವಿರಾರು ಭಕ್ತರು ಕಣ್ತುಂಬಿಕೊಂಡು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದರು. ಮಹಿಳೆಯರು ರಥ ಎಳೆಯುವ ಮೂಲಕ ನಾವು ಪುರುಷರಂತೆ ಸಮಾನರು ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv