ಗರ್ಭಪಾತ ಮಾಡಿಸಿಕೊಳ್ಳಲು ಪತಿಯ ಅನುಮತಿ ಬೇಕಾಗಿಲ್ಲ: ಸುಪ್ರೀಂನಿಂದ ಮಹತ್ವದ ತೀರ್ಪು

Public TV
2 Min Read
supreme court 633x420 e1491027611204

ನವದೆಹಲಿ: ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಲು ಆಕೆಯ ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪ ನೀಡಿದೆ.

ವ್ಯಕ್ತಿಯೊಬ್ಬರು ತನ್ನ ಪತ್ನಿ ತನಗೆ ಮಾಹಿತಿಯನ್ನು ನೀಡದೆ ಗರ್ಭಪಾತವನ್ನು ಮಾಡಿಸಿಕೊಂಡಿದ್ದಾರೆ ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಮಹಿಳೆಯೊಬ್ಬರು ತನ್ನ ಗರ್ಭವನ್ನು ಉಳಿಸಿಕೊಳ್ಳುವ ಅಥವಾ ಅದನ್ನು ಅಂತ್ಯಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಹಾಗೂ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ ಚಂದ್ರಚೂದ್ ತ್ರಿಸದಸ್ಯ ನ್ಯಾಯ ಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠ ತಿಳಿಸಿರುವಂತೆ ದಂಪತಿಯ ನಡುವಿನ ಸಂಬಂಧಗಳನ್ನು ಆಧರಿಸಿ ಪತ್ನಿಯು ತನ್ನ ಗರ್ಭವನ್ನು ಉಳಿಸಿಕೊಂಡು ಮಗುವಿಗೆ ಜನ್ಮ ನೀಡುವ ಅಥವಾ ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.

ತೀರ್ಪಿನ ವೇಳೆ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನನ್ಸಿ ಕಾಯ್ದೆಯನ್ನು ಉಲ್ಲೇಖಿಸಿರುವ ಕೋರ್ಟ್, ಪತಿ-ಪತ್ನಿ ನಡುವೆ ಸಂಬಂಧ ಮುರಿದು ಬಿದ್ದಿರುವುದರಿಂದ ಗರ್ಭಪಾತ ಮಾಡಿಸಲು ಪತಿಯ ಅನುಮತಿ ಪಡೆಯಬೇಕಿಲ್ಲ. ಅದ್ದರಿಂದ ಮಹಿಳೆಗೆ ಗರ್ಭಪಾತ ಮಾಡಿಸಲು ಯಾವುದೇ ವ್ಯಕ್ತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ. ಮಹಿಳೆಯೊಬ್ಬರು ತನಗೆ ಗರ್ಭ ಬೇಡ ಎಂದು ನಿರ್ಣಯವನ್ನು ತೆಗೆದುಕೊಂಡರೆ, ಅದನ್ನು ಯಾರ ಹೊಣೆ ಮಾಡಬೇಕುತ್ತದೆ ಎಂದು ಕೋರ್ಟ್ ಪ್ರಶ್ನಿಸಿದೆ. ಮಹಿಳೆ ಗರ್ಭ ಧರಿಸಿದ್ದ ವೇಳೆ ಚಿಕಿತ್ಸೆ ಪಡೆಯುವ ಅಧಿಕಾರವಿದೆ. ಇದನ್ನು ಪೋಷಕರು ಅಥವಾ ಡಾಕ್ಟರ್‍ಗಳು ನಿರಾಕರಿಸುವಂತಿಲ್ಲ ಎಂದು ಹೇಳಿದೆ.

ಕೋರ್ಟ್‍ನಲ್ಲಿ ದೂರು ಸಲ್ಲಿಸಿದ್ದ ದಂಪತಿಗೆ 1994 ರಲ್ಲಿ ಮದುವೆಯಾಗಿದ್ದು, ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಚೇಧನವನ್ನು ಪಡೆಯಲು ಕೋರ್ಟ್‍ಗೆ ಅರ್ಜಿಯನ್ನು ಸಲ್ಲಿಸಿದ್ದರು. 1999ರ ನಂತರ ಮಹಿಳೆ ತನ್ನ ಪೋಷಕರೊಂದಿಗೆ ವಾಸಮಾಡುತ್ತಿದ್ದಳು. 2002ರಲ್ಲಿ ಚತ್ತೀಸ್‍ಗಢ್ ಕೋರ್ಟ್ ದಂಪತಿ ಒಟ್ಟಿಗೆ ವಾಸಿಸುವಂತೆ ತೀರ್ಪು ನೀಡಿತ್ತು. ನಂತರ ಅಂದ್ರೆ 2003 ರಲ್ಲಿ ಆಕೆ ಗರ್ಭಿಣಿಯಾದಳು.

ಆದ್ರೆ ಇಬ್ಬರ ನಡುವಿನ ವೈವಾಹಿಕ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಮಹಿಳೆ ಗರ್ಭಪಾತ ಮಾಡಿಸಿಕೊಂಡಿದ್ದರು. ಈ ಕುರಿತು ತನ್ನ ಅನುಮತಿ ಇಲ್ಲದೆಯೇ ಪತ್ನಿ ಗರ್ಭಪಾತ ಮಾಡಿಸಿಕೊಂಡಿರುವುದನ್ನು ತಿಳಿದ ಪತಿ ಆಕೆಯ ಪೋಷಕರು, ಸಹೋದರ ಹಾಗೂ ಗರ್ಭಪಾತ ಮಾಡಿದ ಡಾಕ್ಟರ್ ವಿರುದ್ಧ ದೂರು ದಾಖಲಿಸಿದ್ದರು. ತನಗೆ ಉಂಟಾಗಿರುವ ಮಾನಸಿಕ ನೋವು ಹಾಗೂ ಸಮಾಜದೆದುರು ಅವಮಾನವಾಗಿದ್ದಕ್ಕಾಗಿ 30 ಲಕ್ಷ ಪರಿಹಾರವನ್ನು ನೀಡಲು ಸೂಚಿಸುವಂತೆ ಅರ್ಜಿ ಸಲ್ಲಿಸಿದ್ದರು. ಎಂಟಿಪಿ ಕಾಯ್ದೆಯ ಪ್ರಕಾರ ಗರ್ಭವಸ್ಥೆಯಲ್ಲಿರುವ ಮಗುವಿನ ಚಿಕಿತ್ಸೆಯನ್ನು ನೀಡಲು ತಂದೆಯ ಅನುಮತಿ ಕಡ್ಡಾಯ ಎಂದು ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *