– ಸಾವಿರಾರು ಕಾರ್ಡ್‌ದಾರರರಿಂದ ಆಕ್ಷೇಪಣೆ ಸಲ್ಲಿಕೆ
– ಸೂಕ್ತ ದಾಖಲಾತಿ ಸಲ್ಲಿಸಿದವರಿಗೆ ಮಾತ್ರ ಕಾರ್ಡ್
ಬೆಂಗಳೂರು: ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆಗೆ ಆಕ್ಷೇಪ ಸಲ್ಲಿಸಲು ಇದ್ದ ಕಾಲಾವಕಾಶ ಮುಕ್ತಾಯಕ್ಕೆ ಎರಡು ದಿನ ಮಾತ್ರ ಬಾಕಿಯಿದೆ. ಬಿಪಿಎಲ್‌ನಿಂದ ಎಪಿಎಲ್‌ಗೆ (APL) ಶಿಫ್ಟ್ ಆಗಿರುವ ಸಾವಿರಾರು ಕಾರ್ಡ್‌ದಾರರು ಆಕ್ಷೇಪಣೆಗೆ ದಾಖಲಾತಿ ಸಲ್ಲಿಸುತ್ತಿದ್ದಾರೆ. ಬಿಪಿಎಲ್ ಪಡೆಯಲು ಅರ್ಹರು ಎಂದು ಸಾಬೀತು ಮಾಡಿಕೊಳ್ಳದಿದ್ದರೆ ಕಾರ್ಡ್ ಎಪಿಎಲ್‌ಗೆ ಶಿಫ್ಟ್ ಆಗಲಿದೆ.
ನಾವು ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ಜಮೀನು ಇಲ್ಲ, ಸ್ವಂತ ಮನೆಯೂ ಇಲ್ಲ. ಆದರೂ ಕಾರ್ಡ್ ಡಿಲೀಟ್ ಆಗಿದೆ ಎಂದು ಬಿಪಿಎಲ್ ಕಾರ್ಡ್‌ದಾರರು ಆಕ್ರೋಶ ಹೊರಹಾಕಿದ್ದರು. ಎಚ್ಚೆತ್ತ ಸರ್ಕಾರ ದಾಖಲಾತಿ ಸಲ್ಲಿಸಿ ನಾವು ಬಿಪಿಎಲ್ ಮಾನದಂಡದ ಒಳಗಡೆ ಇದ್ದೇವೆ ಎಂದು ದೃಢಪಡಿಸಲು 45 ದಿನಗಳ ಕಾಲಾವಕಾಶ ನೀಡಿ ಕಳೆದ ಅಕ್ಟೋಬರ್ 30 ರಿಂದ ಪರಿಷ್ಕರಣೆ ಕೆಲಸ ಆರಂಭಿಸಿತ್ತು.
ಗಡುವಿನ ಕೊನೆಯ ದಿನ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಡ್‌ದಾರರು ಪರಿಷ್ಕರಣೆ ಮಾಡಲು ನ್ಯಾಯಬೆಲೆ ಅಂಗಡಿಯತ್ತ ಬರುತ್ತಿದ್ದಾರೆ. ರಾಜ್ಯಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ಕಾರ್ಡ್ ಪರಿಷ್ಕರಣೆ ಆಗುತ್ತಿದೆ. ಡಿಲೀಟ್ ಆಗಿರುವ ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ದಾಖಲಾತಿ ನೀಡಬೇಕು. ಅವರು ದಾಖಲಾತಿ ಸಂಗ್ರಹಿಸಿ ಆಹಾರ ಇಲಾಖೆಗೆ ರವಾನೆ ಮಾಡುತ್ತಾರೆ. ಅಹಾರ ಇಲಾಖೆಗೆ ನೀಡಿರುವ ದಾಖಲೆ ಸರಿಯಿದ್ದರೆ ಮಾತ್ರ ಬಿಪಿಎಲ್ ಕಾರ್ಡ್ ಸಿಗಲಿದೆ. ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ದಾರರಿಗೆ ದಸರಾ ಶಾಕ್ – ನ್ಯಾಯಬೆಲೆ ಅಂಗಡಿಯ ಮುಂದೆ ಕಾರ್ಡ್ ಡಿಲೀಟ್ ನೋಟಿಸ್!
ಪರಿಷ್ಕರಣೆಗೆ ಮುಂದಾಗಿದ್ದು ಯಾಕೆ?
ರಾಜ್ಯದಲ್ಲಿ ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಅದರಲ್ಲೂ ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿತ್ತು. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದ್ದವು. ಹೀಗಾಗಿ ಗ್ಯಾರಂಟಿ ಜಾರಿ ಮಾಡಿ ಕಂಗೆಟ್ಟಿದ್ದ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿತ್ತು.
ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದ್ದವು. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿತ್ತು. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿತ್ತು. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಿತ್ತು.
ಯಾರ ಕಾರ್ಡ್ ರದ್ದಾಗುತ್ತೆ?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ವೈಟ್ ಬೋರ್ಡ್ 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ರದ್ದಾಗಲಿದೆ. ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ.

