ಮಂಡ್ಯ: ಲೋಕಸಭಾ ಉಪಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ನಿರಾಸಕ್ತಿ ವ್ಯಕ್ತವಾಗುತ್ತಿದ್ದು, ಇದುವರೆಗೂ ಓರ್ವ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ಯಾರಿಗೂ ಬೇಡವಾಯಿತೇ ಎಂಬ ಚರ್ಚೆ ಜಿಲ್ಲೆಯಲ್ಲಿ ಮನೆ ಮಾಡುತ್ತಿದೆ.
ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳು ಬಾಕಿ ಇದ್ದು, ಸಮಾಜವಾದಿ ಪಕ್ಷದ ನಂದೀಶ್ ಕುಮಾರ್ ಕೆಬಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿದ್ದರೂ ನಾಮಪತ್ರ ಸಲ್ಲಿಸಿಲ್ಲ. ಇತ್ತ ಕಾಂಗ್ರೆಸ್ ತಟಸ್ಥ ಧೋರಣೆ ತೋರಲಿದ್ದು, ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.
ಮೈತ್ರಿ ಸರ್ಕಾರದ ಭಾಗವಾದ ಜೆಡಿಎಸ್‍ಗೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಪಟ್ಟಿಯಲ್ಲಿ ಲಕ್ಷ್ಮಿ ಅಶ್ವಿನ್‍ಗೌಡ ಅವರ ಹೆಸರು ಮಂಚೂನಿಯಲ್ಲಿದ್ದು, ಮಾಜಿ ಶಾಸಕ ಶಿವರಾಮೇಗೌಡ ಅವರು ಟಿಕೆಟ್ ಆಕಾಂಕ್ಷಿದ್ದಾರೆ.
ನನಗೆ ಟಿಕೆಟ್ ನೀಡಲೇ ಬೇಕು ಅಂತಾ ಶಿವರಾಮೇಗೌಡ ಅವರು ಪಟ್ಟು ಹಿಡಿದಿದ್ದಾರಂತೆ. ಆದರೆ ಜೆಡಿಎಸ್ ಮುಖಂಡರ ಒಲವು ಲಕ್ಷ್ಮಿ ಅಶ್ವಿನ್‍ಗೌಡ ಅವರತ್ತ ಇದ್ದು, ಅವರೇ ಜೆಡಿಎಸ್‍ನಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರ ಹೆಸರು ಘೋಷಣೆ ಆಗಿದ್ದು, ಇದುವರೆಗೂ ಅವರು ನಾಮಪತ್ರ ಸಲ್ಲಿಸಿಲ್ಲ.
ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಉಪಚುನಾವಣೆ ಮಂದಗತಿಯಲ್ಲಿ ನಡೆಯುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv