ಮೈಸೂರು: ಹೆಚ್‍ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ ಇನ್ನೂ ಅರ್ಧ ಅಡಿ ಮಾತ್ರ ಬಾಕಿ ಇದೆ. ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಭಾಗದ ರೈತರು ಮತ್ತು ತಾಲ್ಲೂಕಿನ ಜನರ ಮುಖದಲ್ಲಿ ಸಂತಸ ಮೂಡಿಸಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.
2284 ಅಡಿ ಸಾಮಥ್ರ್ಯವಿರುವ ಜಲಾಶಯದಲ್ಲಿ ಪ್ರಸ್ತುತ 2283.50 ಅಡಿ ನೀರು ಸಂಗ್ರಹವಾಗಿದ್ದು 20 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. 15 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ಕೇರಳದ ವೈನಾಡಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.
ಜಲಾಶಯ 19.50 ಟಿಎಂಸಿ ಅಡಿ ನೀರು ಸಂಗ್ರಹದ ಸಾಮಥ್ರ್ಯವಿದ್ದು, ಅದರಲ್ಲಿ 16.50 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ.
17 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ, ನಾಲ್ಕು ವರ್ಷಗಳ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿದೆ. ಪ್ರತಿವರ್ಷ ಬೆಳೆಗೆ ಸುಮಾರು 20 ಟಿಎಂಸಿ ಅಡಿ ಮತ್ತು ಕುಡಿಯಲು 7.86 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಬೆಂಗಳೂರು ಮಂಡ್ಯ ಮೈಸೂರು ನಗರಗಳು ಸೇರಿದಂತೆ ಪ್ರತಿ ತಿಂಗಳು ಕುಡಿಯಲು 0.655 ಟಿಎಂಸಿ ಅಡಿ ನೀರು ಬೇಕಿರುತ್ತದೆ.