ಗದಗ: ಜಿಲ್ಲೆಯ ನರಗುಂದ ತಾಲೂಕಿನ ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹೇಳೋಕೆ ಸರ್ಕಾರಿ ಶಾಲೆಯಾದ್ರು ಇಲ್ಲಿ ಇರೋದು ಮಾತ್ರ ಕೇವಲ 3 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ.
ಹೌದು, ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓರ್ವ ಶಿಕ್ಷಕನಿದ್ದು ಕೇವಲ 3 ಜನ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕ ಎಚ್.ಎಸ್ ಸುಂಕದ ಈ ಮೂರು ಮಕ್ಕಳ ಪೋಷಕರನ್ನು ಕಾಡಿ, ಬೇಡಿ, ಕರೆತರುತ್ತಾರೆ. ನರಗುಂದ ಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿರುವ ಬಂಡೆಮ್ಮ ನಗರದಲ್ಲಿ 50 ಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಈಗ ಶಾಲೆಗೆ ಬರೋ ಮಕ್ಕಳಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದು, ಅಕ್ಷರಶಃ ಬಂಡೆಮ್ಮನಗರದ ಪ್ರಾಥಮಿಕ ಶಾಲೆ ಅನಾಥವಾಗಿದೆ.
Advertisement
Advertisement
ನಾನೊಬ್ಬ ಪದವಿಧರನಾಗಿ ನನ್ನಲ್ಲಿರುವ ಜ್ಞಾನವನ್ನ ಮಕ್ಕಳಿಗೆ ಹೇಳಬೇಕೆಂಬ ಆಸೆ, ಆದ್ರೆ ಈ ಶಾಲೆಗೆ ಮಕ್ಕಳೇ ಬರೋದಿಲ್ಲ. ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರು ಪ್ರಯೋಜವಾಗ್ತಿಲ್ಲ. ಸುಖಾ ಸುಮ್ಮನೇ ತಿಂಗಳ ಸಂಬಳ ಪಡೆಯೋಕೆ ಮನಸ್ಸು ಒಪ್ಪುತ್ತಿಲ್ಲ ಅಂತ ಶಾಲೆಯ ಶಿಕ್ಷಕ ಎಚ್.ಎಸ್ ಸುಂಕದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
ಇನ್ನು ಗದಗ ಜಿಲ್ಲೆಯ ಬಂಡೆಮ್ಮ ನಗರದಲ್ಲಿ 2000 ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ತೆರೆಯಲಾಯಿತು. ಮೊದ ಮೊದಲು 50 ಕ್ಕೂ ಹೆಚ್ಚು ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಗ 3+1 ಅನ್ನೊ ಹಾಗೆ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಶಾಲೆಯಲ್ಲಿ 1 ರಿಂದ 5 ತರಗತಿ ಇದ್ದು, 1ನೇ ಕ್ಲಾಸ್ ಅಪ್ಸಾನಾ, 2ನೇ ಕ್ಲಾಸ್ ಸುಭಾಷ್ ಕುಳಗೇರಿ, 5 ನೇ ಕ್ಲಾಸ್ ಕೌಸರ್ ಬಾನು ಎಂಬ ಮೂವರು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ.
Advertisement
ಶಾಲೆಯಲ್ಲಿ ಇರೋ ಮೂರು ಮಕ್ಕಳಲ್ಲಿ ಕೆಲವೊಮ್ಮೆ ಯಾವೊಂದು ಮಗುವೂ ತರಗತಿಗೆ ಹಾಜರಾಗಲ್ಲ. ಆ ವೇಳೆ ಶಿಕ್ಷಕ ಒಬ್ಬನೆ ಕಾಲ ಕಳೆಯಬೇಕು. ಬಿಸಿಯೂಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇಲ್ಲಿ ಮರಿಚಿಕೆಯಾಗಿವೆ. ಈಗ ಬಂಡೆಮ್ಮ ನಗರದ ಸರ್ಕಾರಿ ಶಾಲೆಗೆ ಮುಚ್ಚುವ ಭೀತಿ ಎದುರಾಗಿದೆ. ಇನ್ನು ಏನ್ ಸರ್ ಈ ಶಾಲೆಯ ಕಥೆ. ಸಮಸ್ಯೆ ಪರಿಹರಿಸೋಕೆ ಏನ್ ಮಾಡ್ತೀರಾ ಅಂತ ಡಿಡಿಪಿಐ ಅವರನ್ನು ಕೇಳಿದ್ರೆ, ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ನೋಡೋಣ ಅಧಿಕಾರಿಗಳೊಂದಿಗೆ ಮಾತನಾಡುತ್ತೀನಿ ಅಂತ ಶಿಕ್ಷಣ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ.
ಶಾಲೆಯಲ್ಲಿ ನಿತ್ಯ ಕೇಳಿಬರಬೇಕಿದ್ದ ಚಿಣ್ಣರ ಕಲರವ ಇಲ್ಲಿ ಮಾಯವಾಗಿದೆ. ಇಲ್ಲಿ ಶಿಕ್ಷಕರ ಪಾಠ ನಿಂತು ಹೋಗಿವೆ. ಶಾಲಾ ಕಟ್ಟಡವೀಗ ವಿಷಾದ ತುಂಬಿದ ಸೌಧದಂತಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲೇ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv