– ಸಾರ್ವಜನಿಕರಲ್ಲಿ ಪೊಲೀಸರು ಮನವಿ
ಬೆಂಗಳೂರು: ಹಣದ ಆಸೆಗೆ ಬಿದ್ದ ವೃದ್ಧ ದಂಪತಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿನಗರ ನಿವಾಸಿಗಳಾದ ಅಂಬುಲಕ್ಷ್ಮಿ ಮತ್ತು ಶ್ರೀನಿವಾಸ್ ದಂಪತಿ ಹಣದ ಕಳೆದುಕೊಂಡಿದ್ದಾರೆ. ಈ ದಂಪತಿಗೆ ಕಳೆದ ನವಂಬರ್ 20ರಂದು ಅಂಬುಲಕ್ಷ್ಮೀ ಮೊಬೈಲ್ ನಂಬರ್‌ಗೆ ಒಂದು ಕಾಲ್ ಬಂದಿತ್ತು. ನಾನು ಸ್ಯಾಮ್‍ಸಾಂಗ್ ಕಂಪನಿ ಏಜೆಂಟ್ ಎಂದು ವ್ಯಕ್ತಿಯೊಬ್ಬ ಫೋನ್ ಮಾಡಿದ್ದ. ಆತ ಸ್ಯಾಮ್ ಸಾಂಗ್ ಕಂಪನಿಯ ಈ ವರ್ಷದ ಲಾಟರಿಯಲ್ಲಿ ನಿಮ್ಮ ನಂಬರ್ ಸೆಲೆಕ್ಟ್ ಆಗಿದ್ದು, 10 ಲಕ್ಷ ಪೌಂಡ್ ಹಣ ಅಂದರೆ 93 ಕೋಟಿ ಹಣ ನಿಮಗೆ ಬಂದಿದೆ ಎಂದಿದ್ದ.
Advertisement
Advertisement
ವ್ಯಕ್ತಿ ಮಾತು ಕೇಳಿದ ವೃದ್ಧ ದಂಪತಿ ಕೋಟಿ ಕೋಟಿ ಆಸೆಗೆ ಬಿದ್ದು, ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಅವರಿಗೆ ನೀಡಿದ್ದಾರೆ. ನಂತರ 93 ಕೋಟಿ ಹಣಕ್ಕೆ ಮೊದಲು ತೆರಿಗೆ ಕಟ್ಟಬೇಕು. ಹಾಗಾಗಿ ನೀವು 1 ಕೋಟಿ 67 ಲಕ್ಷ ಹಣ ಅಕೌಂಟ್‍ಗೆ ಹಾಕಿ ಎಂದು ಹಾಕಿಸಿಕೊಂಡಿದ್ದಾರೆ. ಹಣ ಹಾಕಿದ ನಂತರ ದಂಪತಿ ಅವರಿಗೆ ಫೋನ್ ಮಾಡಿದ್ದಾರೆ. ಆಗ ಆ ನಂಬರ್ ನಾಟ್ ರಿಚಬಲ್ ಬಂದಿದೆ. ಇದರಿಂದ ದಂಪತಿಗೆ ಸ್ಯಾಮ್‍ಸಾಂಗ್ ಕಂಪನಿಯ ಲಾಟರಿ ಬಗ್ಗೆ ಡೌಟ್ ಬಂದಿತ್ತು.
Advertisement
Advertisement
ಸಂಬಂಧಪಟ್ಟ ಆಫೀಸ್‍ಗೆ ಕಾಲ್ ಮಾಡಿ ಕೇಳಿದಾಗಲೇ ವೃದ್ಧ ದಂಪತಿಗೆ ಕೋಟಿ ಪಂಗನಾಮ ಆಗಿರೋದು ಗೊತ್ತಾಗಿದೆ. ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಆನ್‍ಲೈನ್ ಕಳ್ಳರ ಹಾವಳಿ ಜಾಸ್ತಿ ಆಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.