ಚಿಕ್ಕಬಳ್ಳಾಪುರ: ಸ್ನ್ಯಾಪ್ ಡೀಲ್ ನಲ್ಲಿ ನೀವು ವಸ್ತುಗಳನ್ನ ಖರೀದಿಸಿದ್ದೀರಿ, ನಿಮಗೆ 12 ಲಕ್ಷ ರೂ. ಮೌಲ್ಯದ ಟಾಟಾ ಸಫಾರಿ ಕಾರು ಲಾಟರಿ ಬಂದಿದೆ ಎಂದು ಕರೆ ಮಾಡಿದ ಖದೀಮ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ನಗರದ ಹೋಂಡಾ ಶೋ ರೂಂನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿರುವ ಪಾರ್ಥಸಾರಥಿ ವಂಚನೆಗೊಳಗಾದವರು. ಪಾರ್ಥಸಾರಥಿ ಮೊಬೈಲ್‍ಗೆ ಸಂದೇಶ ಕಳುಹಿಸಿ ಕರೆ ಮಾಡಿದ ಅನಾಮಿಕ ವ್ಯಕ್ತಿ ನಿಮಗೆ 12.60 ಲಕ್ಷ ರೂ. ಬೆಲೆಯ ಟಾಟಾ ಸಫಾರಿ ಕಾರು ಲಾಟರಿ ಬಂದಿದೆ ಎಂದು ತಿಳಿಸಿದ್ದಾನೆ. ಆದರೆ ಪಾರ್ಥಸಾರಥಿ ನನಗೆ ಕಾರು ಬೇಡ ಕಾರಿನ ಮೊತ್ತದ ಹಣವನ್ನು ಕೊಡುವಂತೆ ಕೇಳಿದ್ದು, ಕಾರಿನ ಮೊತ್ತದ ಹಣ ಕೊಡಬೇಕಾದರೆ ನೀವು ಮೊದಲು ಪ್ರೊಸೆಸಿಂಗ್ ಫೀಸ್ ಎಂದು ಹಣ ನೀಡಬೇಕು ಎಂದು ವಂಚಕ ಹೇಳಿದ್ದಾನೆ.
Advertisement
Advertisement
ಮೊದಲು 4,500 ರೂ. ಪ್ರೊಸೆಸಿಂಗ್ ಫೀಸ್ ಎಂದು ಪಾರ್ಥಸಾರಥಿ ಅನಾಮಿಕನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದು, ಆ ಬಳಿಕ 12 ಲಕ್ಷದ ದೊಡ್ಡ ಮೊತ್ತದ ಹಣವನ್ನು ನಿಮಗೆ ವರ್ಗಾಯಿಸಲು ಮೊದಲು ಜಿಎಸ್‍ಟಿಗಾಗಿ 18,900 ರೂ. ನೀಡಬೇಕಿದೆ ಎಂದು ಹೇಳಿ ಮತ್ತೆ ಹಣವನ್ನು ಗೂಗಲ್ ಪೇ ಮೂಲಕ ವಂಚಕ ಪಡೆದಿದ್ದ. ಹೀಗೆ ಹಲವು ಬಾರಿ ಪಾರ್ಥಸಾರಥಿಗೆ ಕರೆ ಮಾಡಿದ ವಂಚಕ ಒಟ್ಟು 37,596 ರೂ.ಗಳನ್ನು ಪಡೆದುಕೊಂಡಿದ್ದ.
Advertisement
ಪದೇ ಪದೇ ಕರೆ ಮಾಡಿ ಹಣ ಹಾಕಿ ಎಂದು ಕೇಳುತ್ತಿದ್ದ ಕಾರಣ, ಎಚ್ಚರಗೊಂಡ ಪಾರ್ಥಸಾರಥಿ, ತಾವು ವಂಚನೆಗೊಳಗಾಗಿ ಹಣ ಕಳೆದುಕೊಂಡಿರುವುದನ್ನು ಮನಗಂಡಿದ್ದಾರೆ. ಆ ಬಳಿಕ ಚಿಕ್ಕಬಳ್ಳಾಪುರ ಡಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.