Connect with us

Bengaluru City

ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

Published

on

– ಬೆಂಗ್ಳೂರಿಗೆ ಬಂತು ಈಜಿಪ್ಟ್ ಈರುಳ್ಳಿ

ಬೆಂಗಳೂರು: ದಿನೇ ದಿನೇ ದುಬಾರಿ ಆಗ್ತಿರೋ ಈರುಳ್ಳಿಯ ರೇಟ್ ಕೇಳಿ ಜನ ಸುಸ್ತಾಗಿದ್ದು, ಮುಂಬರುವ ದಿನಗಳಲ್ಲಿ ಕೆ.ಜಿ ಈರುಳ್ಳಿಗೆ 200 ರೂ.ದಾಟಲಿದೆ.

ಹಾಪ್ ಕಾಮ್ಸ್ ನಲ್ಲಿ ಕೆ.ಜಿ ಈರುಳ್ಳಿಗೆ 160 ರೂಪಾಯಿ ಇದ್ದರೆ, ಶುಕ್ರವಾರದವರೆಗೂ ಕೆ.ಜಿ ಈರುಳ್ಳಿಗೆ 142 ರೂ ಇತ್ತು. ಎಪಿಎಂಸಿ ಯಾರ್ಡ್‍ನಲ್ಲೇ ಕೆ.ಜಿ ಫೈನ್ ಈರುಳ್ಳಿಗೆ 180 ರೂಪಾಯಿಗೆ ಏರಿಕೆಯಾಗಿದೆ.

ಗದಗ, ಬಾಗಲಕೋಟೆಯಿಂದ ಟನ್ ಗಟ್ಟಲೆ ಈರುಳ್ಳಿಯನ್ನ ಲಾರಿಗೆ ರೈತರು ತುಂಬಿಸಿಕೊಂಡು ಬರುತ್ತಿದ್ದಾರೆ. ಆದರೆ ರೈತರಿಗೆ ಕ್ವಿಂಟಾಲ್ ಈರುಳ್ಳಿಗೆ ಸಿಗೋದು 8 ರಿಂದ 14 ಸಾವಿರ ಮಾತ್ರ. ಮಧ್ಯವರ್ತಿಗಳ ಹಾವಳಿಯಿಂದ ಅಂಗಡಿಗಳಲ್ಲಿ ಈರುಳ್ಳಿ ದರ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.

ಈರುಳ್ಳಿ ದರ ಏರಿಕೆಯಿಂದಾಗಿ ಜನರಲ್ಲಿ ಆತಂಕ ಮೂಡಿದ್ದು, 1-2 ಕೆ.ಜಿ ಈರುಳ್ಳಿ ತೆಗೆದುಕೊಳ್ಳುತ್ತಿರುವವರು, ಈಗ ಕಾಲು ಕೆಜಿ ಖರೀದಿಸುವ ಪರಸ್ಥಿತಿ ನಿರ್ಮಾಣವಾಗಿದೆ. ಈ ದರ ಹೆಚ್ಚಳ, ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಸಣ್ಣ-ಪುಟ್ಟ ಹೋಟೆಲ್‍ಗಳು ಈಗಾಗಲೇ ನಷ್ಟ ಅನುಭವಿಸುತ್ತಿವೆ. ಬೆಂಗಳೂರು ನಗರಕ್ಕೆ ಈರುಳ್ಳಿ ಪೂರೈಕೆಯಲ್ಲಿ ಗಣನೀಯ ಕಡಿತವಾಗಿದೆ. ದಾವಣಗೆರೆ, ಗದಗ, ಹುಬ್ಬಳ್ಳಿಯಿಂದ ಈರುಳ್ಳಿ ಬರುತ್ತಿಲ್ಲ. ಇದರಿಂದ ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಇದನ್ನೂ ಓದಿ: 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

ಬೆಲೆ ಏರಿಕೆಗೆ ಕಾರಣಗಳೇನು?
ನೆರೆಯಿಂದಾಗಿ ಕೆಲವು ಕಡೆಗಳಲ್ಲಿ ಈರುಳ್ಳಿ ಕೊಚ್ಚಿ ಹೋಗಿದೆ. ಮತ್ತೆ ಹಲವು ಕಡೆ ಮಳೆ ಕಡಿಮೆಯಾಗಿ ಈರುಳ್ಳಿ ಬೆಳೆ ಚೆನ್ನಾಗಿ ಬೆಳೆದಿಲ್ಲ. ಕರ್ನಾಟಕದ ಮಾರುಕಟ್ಟೆಗೆ ಇನ್ನೂ ಹೊಸ ಈರುಳ್ಳಿ ಎಂಟ್ರಿ ಕೊಟ್ಟಿಲ್ಲ. ಇದಲ್ಲದೆ ಈರುಳ್ಳಿ ಬೆಲೆ ಏರಿಕೆ ಡಿಸೆಂಬರ್ ಕೊನೆಯವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರಿಗೆ ಈಜಿಪ್ಟ್ ಈರುಳ್ಳಿ:
ಅತ್ತ ಮಂಗಳೂರಿಗೆ ಟರ್ಕಿ ಈರುಳ್ಳಿ ಬಂದಿಳಿದಿದ್ದರೆ ಇತ್ತ ಸಿಲಿಕಾನ್ ಸಿಟಿಗೆ ಈಜಿಪ್ಟ್ ದೇಶದ ಈರುಳ್ಳಿ ಲಗ್ಗೆಯಿಟ್ಟಿದೆ. ನಗರದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಜಿಪ್ಟ್ ನಿಂದ ಬೆಂಗಳೂರಿಗೆ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

ಮುಂಜಾನೆಯೇ ಯಶವಂತಪುರದ ಈರುಳ್ಳಿ ಮಂಡಿಗೆ ಆಮದಾಗಿದ್ದು, ಈಜಿಪ್ಟ್ ಈರುಳ್ಳಿಗೆ ರೇಟ್ ಫಿಕ್ಸ್ ಮಾಡೋದಷ್ಟೇ ಬಾಕಿ ಇದೆ. ವಿದೇಶದ ಈರುಳ್ಳಿ ನೋಡಲು ವ್ಯಾಪಾರಿಗಳು ಮುಗಿಬಿದ್ದ ಪ್ರಸಂಗವೂ ನಡೆದಿದೆ. 50 ಟನ್ ಈರುಳ್ಳಿ ಆಮದಾಗಿದೆ. 110-120 ರೂಪಾಯಿ ಬೆಲೆ ಬಾಳುವ ಈರುಳ್ಳಿ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ರೇಟ್‍ನಲ್ಲಿ ಇಳಿಕೆಯಾಗುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ:  ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು

Click to comment

Leave a Reply

Your email address will not be published. Required fields are marked *