ಬೆಂಗಳೂರು: ಇಂದು ಈರುಳ್ಳಿ ರೇಟ್ ಕೇಳಿದರೆ ಕಣ್ಣಲ್ಲಿ ನೀರಲ್ಲ ರಕ್ತ ಬರೋದಂತೂ ಗ್ಯಾರಂಟಿ. ಇನ್ನೂ ಬೇಳೆ ಕಾಳುಗಳ ಬೆಲೆಯಂತೂ ಕೇಳುವಂತೆಯೇ ಇಲ್ಲ. ಒಟ್ಟಿನಲ್ಲಿ ನೀವು ಮಾರ್ಕೆಟ್ ಗೆ ಹೋದರೆ ಶಾಕ್ ಆಗುವುದಂತೂ ಗ್ಯಾರಂಟಿಯಾಗಿದೆ.
ಹೌದು. ಕಳೆದ 3-4 ತಿಂಗಳಿನಿಂದ ಜನರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬರೆ ತಟ್ಟಿತ್ತು. ಈಗ ಜನಸಾಮಾನ್ಯರಿಗೆ ಮತ್ತೊಂದು ಏಟು ಬಿದ್ದಿದ್ದು, ತರಕಾರಿ ಅದರಲ್ಲೂ ಈರುಳ್ಳಿ ಹಾಗೂ ಬೇಳೆಕಾಳುಗಳ ಬೆಲೆಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ ಬೇಳೆ-ಕಾಳುಗಳು ಕೈಗೆಟಕುತ್ತಿಲ್ಲ. ಇವುಗಳನ್ನು ನೀವೇನಾದರೂ ಕೊಂಡುಕೊಳ್ಳಲು ಹೋದರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.
Advertisement
Advertisement
90 ರೂಪಾಯಿ ಇದ್ದ ತೋಗರಿಬೇಳೆ 110ರೂ ಆಗಿದೆ ಹಾಗೆಯೇ ಉದ್ದಿನಬೇಳೆ ಹಾಗೂ ಹೆಸರಬೇಳೆಗಳು 70 ಯಿಂದ 130ರೂಗೆ ಏರಿವೆ. ಇನ್ನೂ 60ರೂ ಇದ್ದ ಬಟಾಣಿ 100 ರೂಪಾಯಿ ಆಗಿದೆ. ಜೊತೆಗೆ ಕಡಲೆಬೇಳೆ ರೇಟ್ 45 ರೂಪಾಯಿಯಿಂದ 70 ರೂಪಾಯಿಗೆ ಏರಿಕೆಯಾಗಿದೆ. 55 ರೂ. ಇದ್ದ ಶೇಂಗಾ 140ರೂ ಆಗಿದ್ರೇ, ಅಡುಗೆ ಎಣ್ಣೆ 80 ರೂ. ಇಂದ 95ರೂ ಆಗಿದೆ. ತುಪ್ಪವಂತೂ 380 ರೂ. ಇಂದ 430 ರೂ.ಗೆ ಜಿಗಿದಿದೆ.
Advertisement
ತರಕಾರಿಗಳ ಬೆಲೆ ಸಹ ಗಗನಕ್ಕೇರಿದೆ. ನಗರದ ಹ್ಯಾಪ್ ಕ್ಯಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅದರಲ್ಲೂ ಈರುಳ್ಳಿ ಬೆಲೆ ಕೆ.ಜಿಗೆ 75 ರೂ. ಆಗಿದೆ. ಅದರಲ್ಲೂ ಗುಣಮಟ್ಟದ ಆಧಾರದ ಮೇಲೆ 70 ರಿಂದ 75 ರೂ. ದರ ನಿಗದಿ ಮಾಡಲಾಗಿದೆ.
Advertisement
ಜೀವನಾವಶ್ಯಕ ಆಹಾರ ಪದಾರ್ಥಗಳ ಬೆಲೆ, ಈರುಳ್ಳಿ ಬೆಲೆ ಏರಿಕೆಗೆ ಮಳೆರಾಯನ ಕಣ್ಣಾಮುಚ್ಚಾಲೆ, ಮಹಾರಾಷ್ಟ್ರದಲ್ಲಾದ ಪ್ರವಾಹ ಹಾಗೂ ಹೊಸ ಬೇಳೆ ಬರದೇ ಇರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಬೆಲೆ ಏರಿಕೆ ಖರೀದಿದಾರರನ್ನು ಕಂಗಾಲಾಗುವಂತೆ ಮಾಡಿದೆ.