ರಾಯಚೂರು: ಒಂದ್ಕಡೆ ಟೊಮ್ಯಾಟೋ ದರ ಗ್ರಾಹಕರ ಜೇಬು ಸುಡುತ್ತಿದ್ರೆ, ಇನ್ನೊಂದ್ಕಡೆ ಈರುಳ್ಳಿ ದರ ರೈತರ ನಿದ್ದೆಗೆಡಿಸುವಂತೆ ಮಾಡಿದೆ. ಬಿಸಿಲನಾಡು ರಾಯಚೂರು (Raichuru) ಜಿಲ್ಲೆಯ ರೈತರನ್ನ ಈರುಳ್ಳಿ ದರ (Onion Rate) ನಿಜಕ್ಕೂ ಕಣ್ಣೀರಿಡುವಂತೆ ಮಾಡಿದೆ.

ರಾಯಚೂರು ಜಿಲ್ಲೆಯ ಈರುಳ್ಳಿ ಬೆಳೆಗಾರರ ಬದುಕು ಅಕ್ಷರಶಃ ಈ ಬಾರಿ ಬೀದಿಗೆ ಬಂದಿದೆ. ಬೆಲೆ ಕುಸಿತದಿಂದಾಗಿ ಈರುಳ್ಳಿ ಕಣ್ಣಲ್ಲಿ ನೀರನ್ನೇ ತರಿಸುತ್ತಿದೆ. ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವ ಈರುಳ್ಳಿ ಬೆಲೆಯಿಂದಾಗಿ ರೈತರು ತಮ್ಮ ಬೆಳೆಯನ್ನ ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಸಾಗಾಟದ ವೆಚ್ಚ, ಕೂಲಿ ಖರ್ಚು ವಾಪಸ್ ಬರಲ್ಲ ಅಂತ ರೈತರು ತಮ್ಮ ಈರುಳ್ಳಿ ಬೆಳೆಯನ್ನು ತಾವೇ ನಾಶ ಮಾಡುತ್ತಿದ್ದಾರೆ. ಟ್ರ‍್ಯಾಕ್ಟರ್ ರೂಟವೇಟರ್‌ನಿಂದ ಭೂಮಿಯೊಳಗಿನ ಈರುಳ್ಳಿಗೆಡ್ಡೆಗಳನ್ನ ಹೊರತೆಗೆದು ನಾಶ ಮಾಡುತ್ತಿದ್ದಾರೆ. ಕೂಲಿ, ಗೊಬ್ಬರ, ಕಳೆ ಕೀಟನಾಶಕ ಅಂತ ಎಕರೆಗೆ 70 ರಿಂದ 80 ಸಾವಿರ ರೂ. ಖರ್ಚು ಮಾಡಿದ್ದ ರೈತರ ಈರುಳ್ಳಿ ಕ್ವಿಂಟಾಲ್‌ಗೆ 500 ರಿಂದ 800 ರೂ. ಮಾತ್ರ ಬೆಲೆ ಸಿಗುತ್ತಿದೆ. ಇನ್ನೂ ತರಕಾರಿ ಮಾರುಕಟ್ಟೆಯಲ್ಲಿ 10 ರಿಂದ 15 ರೂ.ಗೆ ಕೆ.ಜಿ ಮಾರಾಟವಾಗುತ್ತಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.ಇದನ್ನೂ ಓದಿ: ʼಸಂಚಾರ್ ಸಾಥಿʼ ಆ್ಯಪ್ ಕಡ್ಡಾಯ ಹಿಂಪಡೆದ ಕೇಂದ್ರ – ಪ್ರಯೋಜನಗಳೇನು? ವಿವಾದವೇಕೆ?
ಕಳೆದ ವರ್ಷ ಈರುಳ್ಳಿ 2,500 ರಿಂದ 3,000 ರೂ. ಕ್ವಿಂಟಾಲ್ ಮಾರಾಟವಾಗಿತ್ತು. ಈಗ 500 ರಿಂದ 800 ರೂ.ಗೆ ಬಂದಿದ್ದು, ಇನ್ನೂ ಇಳಿಕೆಯಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಾರಾಟಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ತಂದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಗ್ರಾಹಕರು ಮಾತ್ರ ಕಡಿಮೆ ಬೆಲೆಯಲ್ಲಿ ಈರುಳ್ಳಿ ಸಿಗುತ್ತೆ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ.

ಒಟ್ನಲ್ಲಿ, ಈ ಬಾರಿ ಈರುಳ್ಳಿ ಬೆಳೆದವರಿಗೂ ಲಾಭವಿಲ್ಲ, ಮಾರಾಟ ಮಾಡುವವರಿಗೂ ಲಾಭವಿಲ್ಲ. ಕಳೆದ ವರ್ಷ ಬಂಪರ್ ಬೆಳೆ ತೆಗೆದವರು ಈ ಬಾರಿ ಸಾಲಗಾರರಾಗಿದ್ದಾರೆ. ವ್ಯವಸಾಯ ಒಂದು ರೀತಿಯ ಜೂಜಾಟ ಅನ್ನೋ ರೀತಿ ರೈತರು ಕೈ ಸುಟ್ಟುಕೊಂಡಿದ್ದಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಈರುಳ್ಳಿ ಖರೀದಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ದ್ವೇಷ ಭಾಷಣ ವಿಧೇಯಕ ಸೇರಿ 8 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ

