ಬೆಂಗಳೂರು: ಇಷ್ಟು ದಿನ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಈರುಳ್ಳಿ ದರ ಈಗ ಕುಸಿತ ಕಂಡಿದ್ದು, ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ.
ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ದರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸೋಮವಾರ ಕೆ.ಆರ್. ಮಾರುಕಟ್ಟೆಯಲ್ಲಿ ಈರುಳ್ಳಿ 40ರಿಂದ 50 ರೂ.ಗೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಈರುಳ್ಳಿ 60ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ. ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ.ಗೆ 70 ರೂ.ನಂತೆ ಮಾರಾಟವಾಯಿತು. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 20 ರೂ.ಗೆ ಮಾರಾಟವಾದ್ರೆ, ಉತ್ತಮ ಗುಣಮಟ್ಟದ ಈರುಳ್ಳಿ 40ರಿಂದ 42 ರೂ. ಹಾಗೂ ಟರ್ಕಿ ಈರುಳ್ಳಿ 10 ರಿಂದ 20 ರೂ.ಗೆ ಮಾರಾಟವಾಯಿತು.
Advertisement
Advertisement
ನವೆಂಬರ್‍ನಿಂದ ಈರುಳ್ಳಿ ದರದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು, ಪ್ರತಿ ಕೆಜಿಗೆ 150 ರಿಂದ 200 ರೂ. ರವರೆಗೂ ತಲುಪಿತ್ತು. ಹೀಗಾಗಿ ದಾಸ್ತಾನು ಕೊರತೆ ನೀಗಿಸಲು ವಿದೇಶಗಳಿಂದಲೂ ಈರುಳ್ಳಿಯನ್ನ ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್‍ನಿಂದ ಆಮದು ಬಳಿಕವೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
Advertisement
ಎರಡು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಿದೆ. ಸೋಮವಾರ 215 ಟ್ರಕ್‍ಗಳಲ್ಲಿ ಈರುಳ್ಳಿ ನಗರಕ್ಕೆ ಬಂದಿದೆ. ಪ್ರತಿ ಕ್ವಿಂಟಲ್‍ಗೆ 4 ಸಾವಿರದಿಂದ 4.2 ಸಾವಿರ ರೂ.ವರೆಗೆ ಮಾರಾಟ ಆಗುತ್ತಿದೆ.