ಹೈದರಾಬಾದ್: ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಕೊಲೆಗೈದಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ರಾತ್ರಿ ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯ ಸಂತಮಗಳೂರು ಗ್ರಾಮದಲ್ಲಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ದುರ್ದೈವಿ ಮಹಿಳೆಯನ್ನು ಕನಕಮ್ಮ(35) ಎಂದು ಗುರುತಿಸಲಾಗಿದೆ.
ಕನಕಮ್ಮ ಅವರು ಸಂತಮಗಳೂರು ಗ್ರಾಮದಲ್ಲಿರೋ ವೈಷ್ಣವಿ ಗ್ರಾನಿಟೆಸ್ ಎಂಬ ಅಂಗಡಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಂತೆಯೇ ಮಂಗಳವಾರ ಅವರಿಗೆ ರಾತ್ರಿ ಪಾಳಿ ಇತ್ತು. ಈ ವೇಳೆ ಕೆಲಸದಲ್ಲಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ದೇಹವನ್ನು ಹತ್ತಿರದ ಕೆರೆಗೆ ಬಿಸಾಕಿ ಹೋಗಿದ್ದಾರೆ.
ಇಂದು ಬೆಳಗ್ಗೆ ಕೆರೆಯಲ್ಲಿ ಕನಕಮ್ಮ ಶವ ಪತ್ತೆಯಾಗಿದೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದಾರೆ. ಈ ವೇಳೆ ದೇಹದ ಮೇಲೆಲ್ಲಾ ಗಾಯಗಳಾಗಿದ್ದು, ಅವರು ಹಾಕಿದ್ದ ಬಟ್ಟೆಯೂ ಹರಿದಿತ್ತು. ಹೀಗಾಗಿ ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ರೇಪ್ ಆಂಡ್ ಮರ್ಡರ್ ಮಾಡಿ ಕೆರೆಗೆ ಬಿಸಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.