ಚಾಮರಾಜನಗರ: ಇದು 170 ಮಕ್ಕಳಿರುವ ಸರ್ಕಾರಿ ಪ್ರಾಥಮಿಕ ಶಾಲೆ (Government School). ಆದರೆ ಈ ಮಕ್ಕಳು ನಿತ್ಯವೂ ಮರದ ಕೆಳಗೆ ಕುಳಿತೆ ಪಾಠ ಕೇಳಬೇಕು. ಅಲ್ಲದೇ 170 ಮಕ್ಕಳು ಸಹ ಒಂದೇ ಶೌಚಾಲಯವನ್ನೇ ಬಳಸಬೇಕು. ಹೀಗಾಗಿ ಇದೀಗ ಮಕ್ಕಳು ನಮ್ಮ ಶಾಲೆಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಿ ಎಂದು ಸರ್ಕಾರದ ಮೊರೆ ಹೋಗಿದ್ದಾರೆ.
ಹೌದು. ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 170 ಮಂದಿ ಮಕ್ಕಳು ಓದುತ್ತಿದ್ದಾರೆ. ಆದರೆ ಈ ಮಕ್ಕಳು ನಿತ್ಯವೂ ಮರದ ಕೆಳಗೆ ಕುಳಿತೆ ಪಾಠ ಕೇಳಬೇಕು. ಅಲ್ಲದೇ 170 ಮಕ್ಕಳು ಸಹ ಒಂದೇ ಶೌಚಾಲಯವನ್ನೆ ಬಳಸಬೇಕು. ಇಲ್ಲ ಬಯಲಿಗೆ ಹೋಗಬೇಕಿದ್ದು, ಇದೀಗ ಮಕ್ಕಳು ನಮ್ಮ ಶಾಲೆಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಿ ಎಂದು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.
ಇಲ್ಲಿ 1 ರಿಂದ 7 ನೇ ತರಗತಿವರೆಗೆ ಶಾಲೆ ಇದೆ. ಸುಮಾರು 170ಕ್ಕೂ ಹೆಚ್ಚು ಮಕ್ಕಳು ಈ ಶಾಲೆಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಕುಳಿತು ಪಾಠ ಕೇಳಲು ಸರಿಯಾದ ಕೊಠಡಿಗಳ ವ್ಯವಸ್ಥೆ ಇಲ್ಲ. ಇಲ್ಲಿ ಕೇವಲ 3 ಕೊಠಡಿಗಳಿವೆ. ಎಲ್ಲಾ ತರಗತಿಯ ಮಕ್ಕಳನ್ನು 3 ಕೊಠಡಿಗಳಲ್ಲಿ ಕೂರಿಸಲಾಗದೇ ಶಾಲೆಯ ಹೊರ ಆವರಣದಲ್ಲಿರುವ ಮರದ ಕೆಳಗೆ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ
ಚಳಿ, ಬಿಸಿಲಿನ ನಡುವೆ ವಿದ್ಯಾರ್ಥಿಗಳು (Students) ಪಾಠ ಕೇಳಬೇಕು. ಸುಮಾರು 3 ವರ್ಷಗಳಿಂದ ಈ ಶಾಲಾ ಮಕ್ಕಳಿಗೆ ಕೊಠಡಿ ಸಮಸ್ಯೆ ಇದೆ. ಅಲ್ಲದೇ 170 ಮಕ್ಕಳಿಗೆ ಇರುವುದು ಒಂದೇ ಶೌಚಾಲಯ. ಹೀಗಾಗಿ ಕೆಲ ಮಕ್ಕಳು ಶೌಚಾಲಯ ಉಪಯೋಗಿಸುತ್ತಾರೆ. ಇನ್ನ ಕೆಲವರು ಶೌಚಾಲಯಕ್ಕಾಗಿ ಬಯಲನ್ನೇ ಅವಲಂಬಿಸಬೇಕು. ಮೂರು ತರಗತಿಯ ಮಕ್ಕಳು ಹೊರಗಡೆ ಕುಳಿತು ಪಾಠ ಕೇಳುತ್ತಿದ್ದೇವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಇನ್ನಾದ್ರೂ ನಮ್ಮ ಶಾಲೆಗೆ ಕೊಠಡಿ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಅಂತಾ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಒಟ್ಟಾರೆ ಇದು ಈ ಒಂದು ಶಾಲೆಯ ಪರಿಸ್ಥಿತಿಯಲ್ಲ. ರಾಜ್ಯದ ಅನೇಕ ಶಾಲೆಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎನ್ನುವ ಸರ್ಕಾರ ಮೊದಲು ಇಂತಹ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಲಿ ಎನ್ನುವುದೇ ನಮ್ಮ ಆಶಯ.