Connect with us

ಬೈಕಿಗೆ ಗುದ್ದಿ ಕಾರು ಚಾಲಕ ಪರಾರಿ – ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬೈಕ್ ಸವಾರ ಸಾವು

ಬೈಕಿಗೆ ಗುದ್ದಿ ಕಾರು ಚಾಲಕ ಪರಾರಿ – ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬೈಕ್ ಸವಾರ ಸಾವು

ಮಂಡ್ಯ: ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

ಹೊಸಹೊಳಲು ಗ್ರಾಮದ 33 ವರ್ಷದ ಕುಮಾರ್ ಮೃತ ದುರ್ದೈವಿ. ಕೆಆರ್ ಪೇಟೆ ಪಟ್ಟಣದ ಎಂ.ಬೊಮ್ಮೇಗೌಡ ವೃತ್ತದಲ್ಲಿ ಇನ್ನೋವಾ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅಪಘಾತವಾದ ತಕ್ಷಣ ಮಾನವೀಯತೆ ಮರೆತ ಕಾರಿನ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆ ಕುಮಾರ್ ಮೃತಪಟ್ಟಿದ್ದಾರೆ. 5 ವರ್ಷದ ಹಿಂದೆ ಮದುವೆಯಾಗಿದ್ದ ಕುಮಾರ್‍ಗೆ 4 ವರ್ಷ ಮತ್ತು 6 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸಾರ್ವಜನಿಕರು ಅಪಘಾತ ಮಾಡಿ ಪರಾರಿಯಾದ ಕಾರಿನ ಫೋಟೋ ತೆಗೆದಿದ್ದು, ಪೊಲೀಸರಿಗೆ ನೀಡಿದ್ದಾರೆ. ಕೆಆರ್ ಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅಪಘಾತವೆಸಗಿ ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement
Advertisement