ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತು ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಹಾದಿಯುದ್ದಕ್ಕೂ ದಟ್ಟ ಮಂಜಿನ ಆಟ. ಹಸಿರ ವನರಾಶಿ ನಡುವಿಂದ ಸಾಗೋ ಬೆಳ್ಮುಗಿಲ ಸಾಲು. ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಸೊಬಗು ಆವರಿಸಿಕೊಂಡಿದೆ.
ನಾಲ್ಕೈದು ದಿನದ ಹಿಂದೆ ಮಳೆಯಿಂದಾಗಿ ರಾಡಿಯಾಗಿದ್ದ ಚಾರ್ಮಾಡಿ ಇದೀಗ ತನ್ನ ಸೊಬಗಿನಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಆಗಾಗ್ಗೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟ್ ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
Advertisement
Advertisement
ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಹಸಿರೊದ್ದು ಕಂಗೊಳಿಸುತ್ತಿದ್ದು, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯುವ ಝರಿಗಳು ಮನಕ್ಕೆ ಮುದ ನೀಡುತ್ತವೆ. ಮುಗಿಲು ಚುಂಬಿಸೋ ಹಸಿರು ಬೆಟ್ಟದ ಮೇಲೆಲ್ಲ ಹರಡಿರುವ ಹಿಮದ ರಾಶಿ. ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನ ಹೊರಸೂಸೋ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ ಮಲೆನಾಡಲ್ಲೊಂದು ಹೊಸ ಲೋಕವನ್ನೆ ಸೃಷ್ಠಿಸಿವೆ ಎಂದು ಪರಿಸರವಾದಿ ಗಿರಿಜಾಶಂಕರ್ ಹೇಳಿದ್ದಾರೆ.