ಮೆಲ್ಬರ್ನ್: ಕ್ರಿಕೆಟ್‍ನಲ್ಲಿ ಎಂತೆಂಥಾ ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಆದ್ರೆ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಒಂದು ಬಿಗ್ ಬ್ಯಾಷ್‍ನಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ಮಾದರಿಯಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಟೂರ್ನಿ ಬಿಗ್‍ಬ್ಯಾಷ್‍ನ 35ನೇ ಪಂದ್ಯದ ಒಂದು ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಅತೀಥೇಯ ಮೆಲ್ಬರ್ನ್ ರೆನಗೇಡ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸ್ಟ್ರೈಕರ್ಸ್, ರೆನಗೇಡ್ಸ್ ಗೆಲುವಿಗೆ 174 ರನ್‍ಗಳ ಗುರಿ ನೀಡಿತ್ತು.
ಚೇಸಿಂಗ್ ವೇಳೆ 15 ಓವರ್ ಗಳಲ್ಲಿ ರೆನಗೇಡ್ಸ್ 100 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ಟ್ರೈಕರ್ಸ್ ಪರ 15ನೇ ಓವರ್ ಎಸೆಯಲು ಬಂದ ರಶೀದ್ ಖಾನ್ ಅವರ ಮೊದಲನೇ ಎಸೆತವನ್ನು ಕ್ರೀಸ್‍ನಲ್ಲಿದ್ದ ಡ್ವೈನ್ ಬ್ರಾವೋ ಸಿಕ್ಸರ್ ಗೆ ಅಟ್ಟಲು ಬಲವಾಗಿಯೇ ಬಾರಿಸಿದ್ದರು.
ಇನ್ನೇನು ಬಾಲ್ ಬೌಂಡರಿ ಗೆರೆ ದಾಟಿತು ಎನ್ನುವಷ್ಟರಲ್ಲಿಯೇ ಅಲ್ಲೊಂದು ಮಹಾ ಮ್ಯಾಜಿಕ್ ನಡೆಯಿತು. ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆಯಲ್ಲಿದ್ದ ಬೆನ್ ಲಾಫ್ಲಿನ್ ದೂರದಿಂದ ಓಡಿ ಬಂದು ಚಿರತೆಯಂತೆ ಜಂಪ್ ಮಾಡಿ ಸಿಕ್ಸರ್ ತಡೆದು ಚೆಂಡನ್ನು ಮತ್ತೆ ಮೈದಾನಕ್ಕೆ ವಾಪಸ್ ಎಸೆದರು.
ಇದೇ ವೇಳೆ ಮೈದಾನದಲ್ಲಿದ್ದ ಮತ್ತೋರ್ವ ಫೀಲ್ಡರ್ ಜಾಕ್ ವೆರರಾಲ್ಡ್ ಮಿಂಚಿನ ವೇಗದಲ್ಲಿ ಬಹುದೂರ ಹಾರಿ ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ರು. ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ 26 ರನ್‍ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.