ವಿಜಯಪುರ: ಪ್ರಾದೇಶಿಕ ಪಕ್ಷಗಳ ಮುಗಿಸಲು ಬಿಜೆಪಿ (BJP) ಪ್ಲ್ಯಾನ್ ಮಾಡುತ್ತಿದೆ, ಇದು ಬಿಜೆಪಿಯವರ ಅಜೆಂಡಾ ಎಂದು `ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಕಿಡಿಕಾರಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ (One Nation One Election) ಎನ್ನುವುದು ಕಾಂಗ್ರೆಸ್ (Congress) ಪಕ್ಷದ ಸಿದ್ಧಾಂತಕ್ಕೆ ವಿರೋಧವಾಗಿದೆ. ನಮ್ಮ ರಾಷ್ಟ್ರೀಯ ನಾಯಕರು ಇದನ್ನು ವಿರೋಧ ಮಾಡಿದ್ದಾರೆ ಬಿಜೆಪಿ ಈ ಮೂಲಕ ಸಣ್ಣ ಪಕ್ಷಗಳನ್ನು ಮುಗಿಸಲು ಪ್ಲ್ಯಾನ್ ಹಾಕಿಕೊಂಡಿದೆ. ಇತ್ತೀಚಿಗೆ ಸಣ್ಣ ಪಕ್ಷಗಳಿಗೆ ಹೆಚ್ಚು ನಂಬರ್ಸ್ ಬರುತ್ತಿದೆ. ಹಾಗಾಗಿ ಪ್ರಾದೇಶಿಕ ಪಕ್ಷಗಳ ಮುಗಿಸಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!
ಕೃಷ್ಣಾ ನದಿಗಾಗಿ 40,000 ಕೋಟಿ ರೂ. ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಎರಡು ವರ್ಷ ಕಳೆದರೂ ಸರ್ಕಾರ ಬಿಡಿಗಾಸನ್ನು ಕೊಟ್ಟಿಲ್ಲ. ಜೊತೆಗೆ 5 ವರ್ಷದಲ್ಲಿ ರಾಜ್ಯಕ್ಕೆ 2 ಲಕ್ಷ ಕೋಟಿ ರೂ. ಹಾಗೂ ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 75 ಸಾವಿರ ಕೋಟಿ ರೂ. ಕೊಡುವುದಾಗಿ ಸರ್ಕಾರ ತಿಳಿಸಿತ್ತು. ಇದುವರೆಗೂ ಯೋಜನೆಗೆ ಬಿಡಿಗಾಸನ್ನು ಕೊಟ್ಟಿಲ್ಲ ಎಂದು ಕೇಳಿದಾಗ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ ಎಂದು ಹೇಳಿ ಜಾರಿಕೊಂಡರು.
ಆಲಮಟ್ಟಿ ಸಂತ್ರಸ್ತರ ಹೋರಾಟ ವಿಚಾರವಾಗಿ ಮಾತನಾಡಿದ ಅವರು, 524 ಮೀ ಎತ್ತರವಿದೆ ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ. ಅದರ ಭೂಸ್ವಾಧೀನ ನೋಟಿಫಿಕೇಷನ್ ಆಗಬೇಕಿದೆ. ನೋಟಿಫಿಕೇಷನ್ ಮುಂಚೆಯೇ ಅಲ್ಲಿ ಕೆಲಸ ಮಾಡಬೇಕಾ? ಬೇಡವಾ? ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಇಷ್ಟೊಂದು ಬೆಲೆ ಇಲ್ಲ. ಭೂಸ್ವಾಧೀನಕ್ಕೆ ಈ ಮೊದಲು ಬೊಮ್ಮಾಯಿ ಸರ್ಕಾರ ಕೊಟ್ಟ ರೇಟ್‌ಗೆ ತಕರಾರಿಲ್ಲ, ನಾವು ಕೊಡಲು ಸಿದ್ಧರಿದ್ದೇವೆ. ಇದೇ ವಿಚಾರಕ್ಕೆ ಬರುವ ಸೋಮವಾರ ಸಿಎಂ ಅವರು ಸಂಬಂಧಿಸಿದ ಕೆಲವರನ್ನು ಕರೆದಿದ್ದಾರೆ, ಅವರು ಅದರ ವಿಚಾರ ಮಾಡುತ್ತಾರೆ. ಸಂತ್ರಸ್ತರು ನೂರು ಬೇಡಿಕೆ ಇಡಲಿ, ಆದರೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವಿದೆಯೊ ಅದನ್ನು ನಾವು ಮಾಡುತ್ತೇವೆ. ಅದಕ್ಕೂ ಮೊದಲು ಕೇಂದ್ರ ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ. ಕೇಂದ್ರ 16 ಸಾವಿರ ಕೋಟಿ ರೂ. ಮಾತ್ರ ಕೊಟ್ಟಿದೆ ಎಂದು ಹೇಳಿದರು.ಇದನ್ನೂ ಓದಿ: ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ – ದೇಶದ ನಾನಾ ಭಾಗಗಳಿಂದ ಭಕ್ತರ ದಂಡು