Connect with us

Bellary

ಬಳ್ಳಾರಿಯಲ್ಲಿ ಬೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ!

Published

on

ಬಳ್ಳಾರಿ: ಮಕ್ಕಳನ್ನು ಹೊತ್ತೊಯ್ದು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಳನ್ನು ಸೆರೆಹಿಡಿಯಲು ಜಿಲ್ಲೆಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ನಿನ್ನೆಯಷ್ಟೇ ಒಂದು ಚಿರತೆಯನ್ನು ಸೆರೆಹಿಡಿಯಲಾಗಿತ್ತು.

ಕಂಪ್ಲಿ ಭಾಗದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಇದೂವರೆಗೆ ಇಬ್ಬರು ಮಕ್ಕಳನ್ನು ಚಿರತೆ ಬಲಿ ಪಡೆದುಕೊಂಡಿದೆ. ಇದರಿಂದ ಈ ಭಾಗದ ಜನರು ಮನೆಯಿಂದ ಹೊರಬರಲು ಹೆದರುವಂತ ಪರಿಸ್ಥಿತಿ ಎದುರಾಗಿತ್ತು. ಕಂಪ್ಲಿ ಭಾಗದ ಸೋಮಲಾಪುರ ಹಾಗೂ ದೇವಾಲಾಪುರವು ಕಾಡಂಚಿನ ಗ್ರಾಮವಾಗಿರುವುದರಿಂದ ಇಲ್ಲಿ ಚಿರತೆಗಳು ಗ್ರಾಮಕ್ಕೆ ಆಹಾರ ಅರಸಿಕೊಂಡು ಬರುತ್ತದೆ. ಹೀಗೆ ಬಂದಾಗ ಜನರ ಮೇಲೆ ದಾಳಿಯೂ ಕೂಡ ನಡೆಸುತ್ತದೆ. ಇದನ್ನೂ ಓದಿ:ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

ಡಿ.25ರಂದು ಜಯಸುಧಾ(13) ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದು ಬಲಿ ಪಡೆದಿತ್ತು. ಶಾಲೆಗೆ ಕಿಸ್ಮಸ್ ರಜೆಯಿದ್ದ ಕಾರಣ ಜಮೀನಿಗೆ ಪೋಷಕರ ಜೊತೆ ಹೋಗುತ್ತಿದ್ದ ಜಯಸುಧಾ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ಹೊತ್ತೊಯ್ದಿತ್ತು. ಚಿರತೆ ದಾಳಿ ನಡೆಸುತ್ತಿದ್ದಂತೆಯೇ ಪೋಷಕರ ಚೀರಾಟ ಕೇಳಿ ಬಾಲಕಿಯನ್ನು ತುಸು ದೂರದಲ್ಲೇ ಬಿಟ್ಟು ಹೋಗಿತ್ತು. ತಕ್ಷಣ ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜಯಸುಧಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಳು.

ಡಿ.12ರಂದು ಬಾಲಕ ವೆಂಕಟಸಾಯಿಯನ್ನು ಚಿರತೆ ಬಲಿ ಪಡೆದಿತ್ತು. ಸಂಜೆ ಆಟವಾಡುವಾಗ ಮನೆಯವರು ನೋಡ ನೋಡುತ್ತಿದ್ದಂತೆಯೇ ಚಿರತೆ ಬಾಲಕನನ್ನು ಎಳೆದೊಯ್ದಿತ್ತು. ಬಳಿಕ ಆತನ ಪೋಷಕರು ಹಾಗೂ ಗ್ರಾಮಸ್ಥರು ಬಾಲಕನನ್ನ ಹುಡುಕಾಡಿದಾಗ ಗ್ರಾಮದ ಹೊರವಲಯದಲ್ಲಿ ಆತ ಶವವಾಗಿ ಪತ್ತೆಯಾಗಿದ್ದನು. ಆದರೆ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ ಅಂತ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸರಣಿ ಸಾವುಗಳಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳನ್ನು ಸೆರೆಹಿಡಿಯಲು ಸೋಮಲಾಪುರ ಹಾಗೂ ದೇವಾಲಾಪುರವು ಗ್ರಾಮದ ಸುತ್ತಮುತ್ತ ಒಟ್ಟು 11 ಕಡೆ ಬೋನು ಅಳವಡಿಸಿದ್ದರು. ಈ ಹಿಂದೆ ಸೋಮಲಾಪುರ ಗ್ರಾಮದಲ್ಲಿ ಎರಡು ಚಿರತೆಗಳು ಹಾಗೂ ಇಂದು ದೇವಾಲಪುರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಇದುವರೆಗೂ ಒಟ್ಟು ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಅವರು ಯಶಸ್ವಿಯಾಗಿ ಸೆರೆಹಿಡಿದು ಜನರ ಆತಂಕವನ್ನು ಕೊಂಚ ಮಟ್ಟಿಗೆ ದೂರ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *