ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚಾಗ್ತಿವೆ. ಇಂದು (ಸೋಮವಾರ) ಸಹ ನಗರದ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕನೊಬ್ಬ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಬಿಟಿಎಂ ಲೇಔಟ್‌ನ ಸುದ್ದಗುಂಟೆಪಾಳ್ಯ ಪೋಲಿಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡದ ಪಾಯ ತೆಗೆಯುವ ವೇಳೆ ಪಕ್ಕದ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಗೋಡೆ ಕುಸಿದಿದೆ. ಪರಿಣಾಮವಾಗಿ ಇಬ್ಬರು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು.
Advertisement
ಇಬ್ಬರಲ್ಲಿ ಬಿಹಾರ ಮೂಲದ 20 ವರ್ಷದ ರಂಜನ್ ಎಂಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಘಡಕ್ಕೆ ಪ್ರಮುಖ ಕಾರಣವೆಂದರೇ ಸೆಲ್ಲರ್ ತೆಗೆಯಲು ಆಳ ಗುಂಡಿ ತೆಗೆಯುತ್ತಿದ್ದಾಗ ಪಕ್ಕದಲ್ಲಿರೋ ಅಪಾರ್ಟ್ಮೆಂಟ್‌ನ ಕಾಂಪೌಡ್‌ಗೆ ಜೆಸಿಬಿಯಿಂದ ಟಚ್ ಆಗಿದ್ದು, ಗೋಡೆ ಕುಸಿದಿದೆ. ಈ ಕಾಂಪೌಂಡ್ ಗೋಡೆಯ ಮಣ್ಣು ಕಾರ್ಮಿಕರ ಮೇಲೆ ಬಿದ್ದಿದೆ. ಮಣ್ಣಿನಲ್ಲಿ ಬಿದ್ದಿದ್ದ ಓರ್ವನನ್ನು ರಕ್ಷಿಸಿದ್ದು, ಮತ್ತೊಬ್ಬ ಮೃತಪಟ್ಟಿದ್ದಾನೆ.
Advertisement
ಈ ಬಗ್ಗೆ ಎಸ್‌ಜಿ ಪಾಳ್ಯ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೊಸ ಕಟ್ಟಡ ಕಟ್ಟಲು ಪಾಯ ತೆಗೆಯುತ್ತಿದ್ದ ಗುತ್ತಿಗೆದಾರನ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಕದ ಅಪಾರ್ಟ್‌ಮೆಂಟ್ ಕೂಡ ಸೇಫ್‌ಯಿಲ್ಲ ಎನಿಸುತ್ತೆ ಎಂದು ಡಿಸಿಪಿ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.