Connect with us

Bengaluru City

ಬೆಂಗಳೂರಿನಲ್ಲಿ ಇ-ಕನ್ನಡ ಲೋಕ ಅನಾವರಣ

Published

on

Share this

ಬೆಂಗಳೂರು: ಕನ್ನಡದ ಮಟ್ಟಿಗೆ ವಿಶಿಷ್ಟ ಎನ್ನಬಹುದಾದ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಮಾರ್ಚ್ 5 ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಿತು.

ಕಲಾವಿದರ ಮಾಹಿತಿ ಕೋಶ, ಪದ ಬಂಧ, ಇಮೇಜ್ ನಿಂದ ಟೆಕ್ಸ್ಟ್, ಟೆಕ್ಸ್ಟ್ ನಿಂದ ಸ್ಪೀಚ್, ಸ್ಪೀಚ್ ನಿಂದ ಟೆಕ್ಸ್ಟ್, ಇ-ಬುಕ್ಸ್ ಸೇರಿದಂತೆ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್ ಗಳು, ಜಾಲತಾಣಗಳ ಮಾಹಿತಿ ನೀಡುವ 36 ಮಳಿಗೆಗಳು ಅಲ್ಲಿದ್ದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ್ ಮಾತನಾಡಿ, ತಂತ್ರಜ್ಞಾನದಲ್ಲಿ ಭಾಷೆ ಬಳಕೆಯಾದಾಗ ಮಾತ್ರ ಆ ಭಾಷೆಗೆ ಭವಿಷ್ಯ ಇರುತ್ತದೆ. ಈ ಕಾರಣಕ್ಕಾಗಿ ಇದೆ ಮೊದಲ ಬಾರಿಗೆ ಇಲಾಖೆಯ ವತಿಯಿಂದ ಒಂದೇ ವೇದಿಕೆಯಲ್ಲಿ ಕನ್ನಡವನ್ನು ಕಟ್ಟುತ್ತಿರುವ ಮಾಹಿತಿ ತಂತ್ರಜ್ಞಾನ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಯಾವುದೇ ಕ್ಷೇತ್ರದ ಬೆಳವಣಿಗೆಯಾಗಬೇಕಾದರೆ ಅದಕ್ಕೆ ಆರ್ಥಿಕ ಸಹಾಯ ಬೇಕಾಗುತ್ತದೆ. ಸಾಫ್ಟ್ ವೇರ್ ದುಡ್ಡು ಕೊಡಬೇಕೇ? ಬೇಡವೇ? ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ ತಂತ್ರಜ್ಞರಿಗೆ ಸಂಭಾವನೆ ಸಿಗುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ನಾವು ಕಂಡುಕೊಳ್ಳಬೇಕಿದೆ. ಯುನಿಕೋಡ್ ಬಳಕೆ ಸರ್ಕಾರ  ಎಲ್ಲ ಇಲಾಖೆಗಳಲ್ಲಿ  ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿ ಒಂದೇ ವೇದಿಕೆಯಲ್ಲಿ ಅವಕಾಶ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಇ-ಜ್ಞಾನ ವೆಬ್ ಸೈಟ್ ರೂವಾರಿ ಟಿ.ಜಿ. ಶ್ರೀನಿಧಿ ಬರೆದ 29 ಪುಟಗಳ ‘ಕನ್ನಡ ತಂತ್ರಜ್ಞಾನ ನಿನ್ನೆ ಇಂದು ನಾಳೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಈ ಮಳಿಗೆಗಳಿತ್ತು: ಕಣಜ, ವಿಕಿಪೀಡಿಯ, ಭಾರತವಾಣಿ, ಸಂಚಿ ಫೌಂಡೇಶನ್, ಪದ ತಂತ್ರಾಂಶ, ಕನ್ನಡ ಒಸಿಆರ್, ಜಸ್ಟ್ ಕನ್ನಡ, ಡೈಲಿ ಹಂಟ್, ಕನ್ನಡ ಗೊತ್ತಿಲ್ಲ, ಕನ್ನಡ ಸಂಪದ, ಕಲಾಸ್ಟೇಜ್.ಕಾಂ ಸೇರಿದಂತೆ ಅನೇಕ ಮಳಿಗೆಗಳಿತ್ತು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕೆಲಸಗಳು ನಡೆದಿದ್ದು, ಇಂತಹ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವ ‘ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ ಜ್ಞಾನಕೋಶ ಹಾಗೂ ಇ-ಜ್ಞಾನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿತ್ತು.

 

Click to comment

Leave a Reply

Your email address will not be published. Required fields are marked *

Advertisement