ರಾಮನಗರ: ರಸ್ತೆ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ರಾಯಸಂದ್ರ ಗೇಟ್ ಬಳಿ ನಡೆದಿದೆ,
ಸರಂದೀಪ್ ಸಿನ್ಹಾ(23) ಮೃತ ವಿದ್ಯಾರ್ಥಿ. ಈತ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಐವರು ವಿದ್ಯಾರ್ಥಿಗಳು ಹೊರ ರಾಜ್ಯದವರು ಎಂದು ಗುರುತಿಸಲಾಗಿದೆ.
ಈ ಐವರು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ರಜೆ ಇದ್ದ ಕಾರಣ ಬಿಳಿಗಿರಿ ರಂಗನಬೆಟ್ಟಕ್ಕೆ ಕಾರಿನಲ್ಲಿ ಹೋಗಿದ್ದಾರೆ. ಆದರೆ ಮರಳಿ ಬರುವಾಗ ಬೆಂಗಳೂರು- ಕನಕಪುರ ಮಾರ್ಗ ಮಧ್ಯೆ ಇರುವ ರಾಯಸಂದ್ರ ಗೇಟ್ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಪರಿಣಾಮ ಸರಂದೀಪ್ ಸಿನ್ಹಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಪಾಘತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವಿದ್ಯಾರ್ಥಿಯ ದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕನಕಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.