ಬೆಂಗಳೂರು: ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟವರು ರಾಜ್ ಬಿ ಶೆಟ್ಟಿ. ಮನುಷ್ಯಸಹಜ ಒಳತೋಟಿಗಳಿಗೆ ಕನ್ನಡಿ ಹಿಡಿದಂಥಾ ಈ ಚಿತ್ರ ಹಿಟ್ ಆದ ನಂತರ ರಾಜ್ ನಟನಾಗಿಯೇ ನೆಲೆ ನಿಂತಿದ್ದಾರೆ. ಎರಡೆರಡು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಅವರೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ!
ಈ ಹಿಂದೆ ಚಮಕ್, ಅಯೋಗ್ಯದಂಥಾ ಚಿತ್ರಗಳಿಗೆ ಹಣ ಹೂಡಿರುವ ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಮುಹೂರ್ತ ಸಮಾರಂಭವೂ ನೆರವೇರಿದೆ. ಇನ್ನೇನು ಚಿತ್ರೀಕರಣ ಆರಂಭಿಸಲಿರೋ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರಿಗೆ ಪ್ರೇಕ್ಷಕರೆಲ್ಲರೂ ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿಯೂ ಅದೇ ಮುಗ್ಧ ನೋಟದೊಂದಿಗೇ ಕಾರ್ಪೋರೇಟ್ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ರಾಜ್ ಬಿ ಶೆಟ್ಟಿ ಮತ್ತೆ ಗೆಲ್ಲಬಹುದಾದ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ!
Advertisement
ಈಗಾಗಲೇ ಅಮ್ಮಾಚಿ ಎಂಬ ನೆನಪು ಮತ್ತು ಮಾಯಾಬಜಾರ್ ಚಿತ್ರಗಳನ್ನು ಮುಗಿಸಿಕೊಂಡಿರೋ ರಾಜ್ ಬಿ ಶೆಟ್ಟಿಯ ಭರವಸೆಯ ಚಿತ್ರವಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಗಮನ ಸೆಳೆದಿದೆ. ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ನಡೆಯುವ ಮೂಲಕ ಈ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.