ಬೆಂಗಳೂರು: ಬದುಕು ಒಂದು ದಂಡೆಗೆ ಬಂದು ನಿಂತಿದೆ ಅಂದಾಗ.. ಕಣ್ಮುಂದೆ ಕತ್ತಲಿದೆ, ಬೆಳಕು ಕಷ್ಟ-ಕಷ್ಟ ಅಂತ ಅನಿಸಿದಾಗ.. ಸಹಜವಾಗಿಯೇ ಬರುವ ದುಷ್ಟ ಆಲೋಚನೆ ನಮ್ಮನ್ನು ನಾವು ಕೊಂದುಕೊಳ್ಳೋದು. ಈ ಕೃತ್ಯ ಮಹಾಪರಾಧ ಎಂದು ಟೀಂ ಇಂಡಿಯಾದ (Team India) ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ (Mohammad Shami) ಗೊತ್ತಿದೆ. ತಾನು ಇಷ್ಟೊಂದು ಕಷ್ಟಗಳನ್ನು ದಾಟಿಕೊಂಡು ಈ ಹಂತಕ್ಕೆ ಬಂದಿದ್ದು ಸಾಯೋದಕ್ಕಾ ಎಂದು ಮನಸು ಹೇಳುತ್ತಿದೆ. ಆದರೂ, ಮೂರು ಬಾರಿ ಆತ್ಮಹತ್ಯೆಯ ಯೋಚನೆ ಮಾಡಿದ್ದರು ಶಮಿ. ಸ್ವತಃ ಈ ಮಾತನ್ನು ಅವರೇ ಒಪ್ಪಿಕೊಂಡಿದ್ದಾರೆ. ಆ ಆಲೋಚನೆ ನಾನು ಮಾಡಬಾರದಿತ್ತು ಎಂದು ಈಗಲೂ ನೊಂದುಕೊಳ್ಳುತ್ತಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ
Advertisement
ಅಷ್ಟಕ್ಕೂ ಶಮಿ ಇಂಥದ್ದೊಂದು ಆಲೋಚನೆ ಮಾಡಿದ್ದು ಮತ್ತದೇ ಪತ್ನಿಯೊಂದಿಗಿನ ವಿರಸ. ಒಂದು ಕಡೆ ಸಾಲು-ಸಾಲು ಆರೋಪಗಳನ್ನು ಪತ್ನಿ ಹಸೀನ್ ಮಾಡಿದ್ದಾರೆ. ಮತ್ತೊಂದು ಕಡೆ ತಾನು ನಂಬಿದ್ದ ಕ್ರಿಕೆಟ್ (Cricket) ಕೂಡ ಕೈ ಕೊಟ್ಟಿತ್ತು. ಈ ನಡುವೆ ಪೊಲೀಸ್ ನೋಟಿಸ್, ವಿಚಾರಣೆ, ಕೋರ್ಟ್ ಕಟಕಟೆ, ಜಗತ್ತಿನ ನಿಂದನೆ. `ತಾನು ಅಂಥವನಲ್ಲ’ ಎಂದು ಕೂಗಿ ಕೂಗಿ ಹೇಳಿದರೂ, ಕೇಳದ ಜಗತ್ತು. ಇವೆಲ್ಲವೂ ಶಮಿಯನ್ನು ಹೈರಾಣು ಮಾಡಿದ್ದವು. ಇನ್ನೇನು ಈ ಜಗತ್ತಿನಿಂದ ತನಗೆ ಬಿಡುಗಡೆ ಬೇಕು ಅನಿಸಿದಾಗ ಮತ್ತೆ ಕೈ ಹಿಡಿದದ್ದು, ತನ್ನ ಸ್ನೇಹಿತರು. ಮತ್ತು ಕುಟುಂಬ.
Advertisement
Advertisement
ಸತ್ಯ ನಿನ್ನಲ್ಲಿದ್ದರೇ ನಿನಗೆ ಗೆಲುವು.. ಹೋರಾಟ ಮಾಡು ಅಂದರು ಗೆಳೆಯರು. ನೀನು ಹುಟ್ಟಿದ್ದೇ ಕ್ರಿಕೆಟ್ ಆಡೋಕೆ ಅಂತ ಯಾವಾಗಲೂ ಹೇಳುತ್ತಿದ್ದೆ ಅದನ್ನು ನೆನಪಿಸಿಕೋ ಎಂದಿತ್ತು ಹೆತ್ತ ಒಡಲು. ಮತ್ತೆ ಗಟ್ಟಿಯಾದರೂ ಶಮಿ. ಕೋರ್ಟ್, ಸ್ಟೇಷನ್, ವಿಚಾರಣೆ ಎಲ್ಲವನ್ನೂ ಎದುರಿಸಿಕೊಂಡು ಮತ್ತೆ ಪಿಚ್‌ಗೆ ಇಳಿದರು. ತನ್ನ ಇಡೀ ಕೋಪವನ್ನು ಶಕ್ತಿಯನ್ನಾಗಿ ಬದಲಾಯಿಸಿಕೊಂಡರು. ಬೌಲಿಂಗ್ ವೇಗವನ್ನು ಹೆಚ್ಚಿಸಿಕೊಂಡರು. ನೋವೆಲ್ಲ ಬೆವರಾಗಿ ಹರಿಯಿತು. ಅವಮಾನಗಳು ಬೂಟ್ ಕೆಳಗೆ ಬಿದ್ದವು. ಮತ್ತೆ ಅವರ ಕಠಿಣ ಶ್ರಮ ಕೈ ಹಿಡಿಯುತು.
Advertisement
ಹೌದು, ಅವಮಾನದಿಂದ ಕುಂದಿಹೋಗಿದ್ದ ಶಮಿ, ಮತ್ತೆ ಮನೆಯಿಂದ ಆಚೆ ಕಾಲಿಡಲಾರೆ ಎಂದು ಶಪಥ ಮಾಡಿದ್ದರು. ಈ ಜಗತ್ತೇ ಬೇಡ ಎಂದು ನಿರ್ಧರಿಸಿದ್ದರು. ಆದರೆ, ಹುಟ್ಟಿದ್ದೇ ಗೆಲ್ಲೋದಕ್ಕೆ ಎನ್ನುವ ಮಾತೊಂದು ಅವರನ್ನು ಬದಲಿಸಿತು. ಹಾಗಾಗಿ ಶಮಿ ಗೆಲ್ಲುತ್ತಾ ಹೋದರು. ಕೇವಲ ಕ್ರಿಕೆಟ್ ಪಂದ್ಯದಲ್ಲಿ ಮಾತ್ರ ಅವರು ಗೆಲ್ಲಲಿಲ್ಲ. ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಈ ಶಮಿ ಗೆದ್ದಿದ್ದಾರೆ. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್ ಭಾವುಕ