– ಕುಮಾರಾಧಾರ ಸ್ನಾನಘಟ್ಟ ಮುಳುಗಡೆ
– ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ
ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಮಹಾಪ್ರವಾಹಕ್ಕೆ ನಲುಗಿ ಈಗಷ್ಟೇ ಚೇತರಿಸಿಕೊಳ್ತಿದೆ. ಆದರೆ ಅಷ್ಟರಲ್ಲೇ ವರುಣದೇವ ಸೆಕೆಂಡ್ ರೌಂಡ್ ಆಟಕ್ಕೆ ನಿಂತಿದ್ದಾನೆ.
ಮಳೆಯಿಂದ ಉತ್ತರ ಕರ್ನಾಟಕ, ಕಾಫಿನಾಡು, ಶಿವಮೊಗ್ಗ ಈಗಾಗಲೇ ಹೈರಾಣಾಗಿದೆ. ಕಂಡು ಕೇಳರಿಯದ ಪ್ರವಾಹದಿಂದ ಬಸವಳಿದಿದೆ. ಆದರೆ ಅದರ ನಡುವೆ ಈಗ ವರುಣದೇವನ ಸೆಕೆಂಡ್ ರೌಂಡ್ ಅಬ್ಬರ ಶುರುವಾದಂತಿದೆ. ಉತ್ತರ ಕರ್ನಾಟಕ, ಚಿಕ್ಕಮಗಳೂರು, ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೊಯ್ನಾ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಚಿಕ್ಕೋಡಿಯ ಯಡೂರು-ಕಲ್ಲೋಳ ಸೇತುವೆ ಜಲಾವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ಜಾನುವಾರು, ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ.
Advertisement
Advertisement
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ 5 ಗೇಟ್‍ಗಳನ್ನು ತೆರೆದು 69 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮದ 15 ಮನೆಗಳು ಸಂಪೂರ್ಣ ಜಲಾವೃತವಾಗಿದೆ. ಇತ್ತ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕಾಳಿ ನದಿ ಪ್ರವಾಹಕ್ಕೆ ಮನೆ ಕುಸಿದು ಬಿದ್ದಿದೆ. ಪಶ್ಚಿಮ ಘಟ್ಟಗಳಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಿದ್ದು, ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಾಧಾರ ನದಿಯ ಸ್ನಾನಘಟ್ಟ ಮುಳುಗಡೆ ಆಗಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
Advertisement
ಕೆಆರ್‍ಎಸ್ ಡ್ಯಾಮ್‍ನಿಂದ 43 ಸಾವಿರ ಕ್ಯೂಸೆಕ್‍ಗೆ ನೀರನ್ನು ಹರಿಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಹಾಸನದಲ್ಲಿ ಕಳೆದ 15 ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ. ಸಕಲೇಶಪುರ, ಅರಕಲಗೂಡು, ಆಲೂರು ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದ್ದು, ಜನರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
Advertisement
ಕೊಡಗಿನಲ್ಲಿ ಮಳೆ ಹಿನ್ನೆಲೆಯಲ್ಲಿ ಮತ್ತೆ ಭೂಕುಸಿತದ ಆತಂಕ ಶುರುವಾಗಿದೆ. ಮಂಗಳೂರು-ಮಡಿಕೇರಿ ರಸ್ತೆಯ ಜೋಡುಪಾಲ ಬಳಿ ಭೂಕುಸಿತವಾಗಿದೆ. 2 ಮನೆಗಳು ಬಿರುಕುಬಿಟ್ಟಿದೆ. ಭಾಗಮಂಡಲ, ತಲಕಾವೇರಿ ಮತ್ತು ಬ್ರಹ್ಮಗಿರಿ ಬೆಟ್ಟಪ್ರದೇಶಗಳಲ್ಲಿ ಮಳೆ ಬಿಟ್ಟುಬಿಡದೆ ಧಾರಕಾರವಾಗಿ ಸುರಿಯುತ್ತಿದೆ. ಉಕ್ಕಿ ಹರಿದಿದ್ದ ಕಾವೇರಿ ಮತ್ತೆ ಪ್ರವಾಹ ಭೀತಿ ಸೃಷ್ಟಿಸುತ್ತಿದ್ದಾಳೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಆಗ್ತಿದೆ. ಮಳೆ ನಡುವೆಯೇ ಭೂಮಿ ಒಳಗಿನಿಂದ ವಿಚಿತ್ರ ಶಬ್ಧ ಕೇಳಿ ಬರುತ್ತಿದೆ. ಶಬ್ದ ಕೇಳಿ ಜನ ಭಯ ಬೀಳುತ್ತಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದೆ.